ಖ್ಯಾತ ನಿರೂಪಕನನ್ನು ವರಿಸಲಿದ್ದಾರೆ ಗಾಯಕಿ ನೇಹಾ ಕಕ್ಕರ್

ಮುಂಬೈ: ಬಾಲಿವುಡ್‍ನ ಖ್ಯಾತ ಹಿನ್ನೆಲೆ ಗಾಯಕಿ ನೇಹಾ ಕಕ್ಕರ್ ಅವರು ಸ್ಟಾರ್ ನಿರೂಪಕರೊಬ್ಬರನ್ನು ವರಿಸಲಿದ್ದಾರೆ ಎಂಬ ಸುದ್ದಿ ಬಾಲಿವುಡ್ ಅಂಗಳದಲ್ಲಿ ಕೇಳಿಬರುತ್ತಿದೆ.

ಸದ್ಯ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಒಂದು ರಿಯಾಲಿಟಿ ಶೋನ ತೀರ್ಪುಗಾರ್ತಿಯಾಗಿ ನೇಹಾ ಕಕ್ಕರ್ ಭಾಗವಹಿಸುತ್ತಿದ್ದು, ಅದೇ ಕಾರ್ಯಕ್ರಮದ ನಿರೂಪಕ ಆದಿತ್ಯ ನಾರಾಯಣ್ ಅವರನ್ನು ನೇಹಾ ಕಕ್ಕರ್ ಮದುವೆಯಾಗಲಿದ್ದಾರೆ ಎಂದು ಹೇಳಲಾಗಿದೆ.

ಒಂದೇ ಕಾರ್ಯಕ್ರಮದಲ್ಲಿ ತೀರ್ಪುಗಾರ್ತಿಯಾಗಿ ಹಾಗೂ ನಿರೂಪಕನಾಗಿ ಭಾಗವಹಿಸುತ್ತಿರುವ ನೇಹಾ ಮತ್ತು ಆದಿತ್ಯ ನಡುವೆ ಪ್ರೇಮಾಂಕುರವಾಗಿದ್ದು, ಇದೇ ತಿಂಗಳು ಅಂದರೆ ಫೆಬ್ರವರಿ 14 ರಂದು ಪ್ರೇಮಿಗಳ ದಿನದಂದು ಈ ಜೋಡಿ ಹಸಮಣೆ ಹತ್ತಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ನೇಹಾ ಕಕ್ಕರ್ ಆಗಲಿ ಅಥವಾ ಆದಿತ್ಯ ನಾರಾಯಣ್ ಆಗಲಿ ಎಲ್ಲೂ ಬಹಿರಂಗವಾಗಿ ಹೇಳಿಕೊಂಡಿಲ್ಲ.

ಈ ಶೋನ ಆರಂಭದಲ್ಲಿ ಆದಿತ್ಯ ನೇಹಾ ಜೊತೆ ಫ್ಲರ್ಟ್ ಮಾಡುತ್ತಿದ್ದರು. ನಂತರ ಅವರಿಗೆ ಪ್ರಪೋಸ್ ಕೂಡ ಮಾಡಿದ್ದರು. ಇದಾದ ಬಳಿಕ ಇತ್ತೀಚಿಗೆ ಶೋನಲ್ಲಿ ಆದಿತ್ಯ ನಾರಾಯಣ್ ಪೋಷಕರಾದ ಉದಿತ್ ನಾರಾಯಣ್ ಮತ್ತು ದೀಪಾ ನಾರಾಯಣ್ ಬಂದಿದ್ದರು. ಜೊತೆಗೆ ನೇಹಾ ಕಕ್ಕರ್ ಪೋಷಕರು ಕೂಡ ಕಾರ್ಯಕ್ರಮಕ್ಕೆ ಬಂದಿದ್ದರು. ಈ ಸಮಯದಲ್ಲಿ ಆದಿತ್ಯ ನಾರಾಯಣ್ ಪೋಷಕರು ನೇಹಾಗೆ, ನಮ್ಮ ಮನೆಯ ಸೊಸೆ ಆಗ್ತೀಯಾ ಎಂದು ಕೇಳಿದ್ದರು. ಈ ಎಲ್ಲಾ ವಿಚಾರಗಳಿಂದ ಈ ಇಬ್ಬರು ಮದುವೆಯಾಗುತ್ತಾರೆ ಎಂದು ಹೇಳಲಾಗುತ್ತಿದೆ.

ಈ ಕಾರ್ಯಕ್ರಮದಲ್ಲಿ ಈ ಇಬ್ಬರು ರೊಮ್ಯಾಂಟಿಕ್ ಸಾಂಗ್ ಒಂದಕ್ಕೆ ಹೆಜ್ಜೆ ಹಾಕಿದ್ದರು. ಇದಾದ ನಂತರ ಖಾಸಗಿ ವಾಹಿನಿಯೊಂದು ಇವರಿಬ್ಬರ ಸಂಬಂಧದ ಬಗ್ಗೆ ಟ್ವೀಟ್ ಕೂಡ ಮಾಡಿತ್ತು. ಇದರ ಜೊತೆಗೆ ನೇಹಾ ಮತ್ತು ಆದಿತ್ಯ ಸಾಮಾಜಿಕ ಜಾಲತಾಣದಲ್ಲಿ ಅವರಿಬ್ಬರ ಫೋಟೋಗಳನ್ನು ಆಗಾಗ ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಇತ್ತೀಚೆಗೆ ಈ ಕಾರ್ಯಕ್ರಮಕ್ಕೆ ಅಥಿತಿಯಾಗಿ ಬಂದಿದ್ದ ಕಾರ್ತಿಕ್ ಆರ್ಯನ್ ಮತ್ತು ಸಾರಾ ಆಲಿಖಾನ್ ಕೂಡ ಈ ಜೋಡಿಯ ಮದುವೆಗೆ ಶುಭಕೋರಿದ್ದಾರೆ ಎನ್ನಲಾಗಿದೆ. ಆದರೆ ಯಾವುದೂ ಅಧಿಕೃತವಾಗಿಲ್ಲ. ನೇಹಾ ಮತ್ತು ಆದಿತ್ಯ ನಿಜವಾಗಲು ಮದುವೆಯಾಗುತ್ತಾರಾ? ಇಲ್ಲ ಇದೆಲ್ಲ ಗಾಳಿ ಸುದ್ದಿನ ಕಾದು ನೋಡಬೇಕಿದೆ.

Comments

Leave a Reply

Your email address will not be published. Required fields are marked *