ಪ್ರವಾಹದಲ್ಲಿ ಸಿಲುಕಿಕೊಳ್ತು 2 ಸಾವಿರ ಪ್ರಯಾಣಿಕರಿದ್ದ ರೈಲು

– ರೈಲ್ವೇ ಇಲಾಖೆ ಮನವಿ
– ಸ್ಥಳಕ್ಕೆ ದೌಡಾಯಿಸಿದ ಎನ್‍ಡಿಆರ್‍ಎಫ್ ಸಿಬ್ಬಂದಿ

ಮುಂಬೈ: ಮಹಾರಾಷ್ಟ್ರದ ದಕ್ಷಿಣ ಭಾಗದಲ್ಲಿ ಸುರಿಯುತ್ತಿರುವ ಕುಂಭದ್ರೋಣ ಮಳೆಯಿಂದಾಗಿ ಮುಂಬೈ-ಕೊಲ್ಹಾಪುರ ಮಹಾಲಕ್ಷ್ಮಿ ಎಕ್ಸ್ ಪ್ರೆಸ್ ರೈಲು ಪ್ರವಾಹದ ನೀರಿನಲ್ಲಿ ಸಿಲುಕಿದೆ. ಸುಮಾರು 2 ಸಾವಿರ ಪ್ರಯಾಣಿಕರಿರುವ ಈ ರೈಲು ಬದ್ಲಾಪುರ ಮತ್ತು ವಂಗಣಿ ನಡುವೆ ನಿಲುಗಡೆಯಾಗಿದ್ದು, ನಿನ್ನೆ ರಾತ್ರಿಯಿಂದ ನಿಂತಲ್ಲೇ ನಿಂತಿದೆ.

ಘಟನೆ ಕುರಿತು ಮಾಹಿತಿ ಪಡೆದ ರೈಲ್ವೇ ಪೊಲೀಸರು ಸ್ಥಳಕ್ಕೆ ತಲುಪಿದ್ದು, ಪ್ರಯಾಣಿಕರಿಗೆ ನೀರು, ಬಿಸ್ಕೆಟ್ ನೀಡಿದ್ದಾರೆ. ಅಲ್ಲದೆ ಎನ್‍ಡಿಆರ್ ಎಫ್ ತಂಡ ಕಾರ್ಯಾಚರಣೆಗೆ ಇಳಿದಿದ್ದು, 8 ಬೋಟ್‍ಗಳೊಂದಿಗೆ ಸ್ಥಳಕ್ಕೆ ಸೇರಿಕೊಳ್ಳಲಿದೆ. ಈ ಕುರಿತು ಟ್ವೀಟ್ ಮಾಡಿರುವ ರೈಲ್ವೇ ಇಲಾಖೆ, ಪ್ರಯಾಣಿಕರನ್ನು ರೈಲಿನಿಂದ ಕೆಳಗೆ ಇಳಿಯದಂತೆ ಮನವಿ ಮಾಡಿದೆ.

ಘಟನಾ ಸ್ಥಳಕ್ಕೆ ದೌಡಾಯಿಸಿರುವ ಪೊಲೀಸರು ಪ್ರಯಾಣಿಕರಲ್ಲಿ ಧೈರ್ಯ ತುಂಬುವ ಕೆಲಸ ಮಾಡಿದ್ದು, ಪ್ರಯಾಣಿಕರು ಭಯ ಪಡುವ ಅಗತ್ಯ ಇಲ್ಲ ಎಂದು ಹೇಳಿ ರಕ್ಷಣೆಗೆ ಮುಂದಾಗಿದ್ದಾರೆ. ರೈಲಿನಲ್ಲಿ ಇರುವ ಜನರಿಗೆ ಅಗತ್ಯವಾದ ಆರೋಗ್ಯ ಸೇವೆಯನ್ನು ನೀಡಲು ಕೂಡ ಸರ್ಕಾರ ಕ್ರಮಗಳನ್ನು ಕೈಗೊಂಡಿದೆ. ಅಲ್ಲದೆ ಪ್ರಯಾಣಿಕರನ್ನು ಕೊಲ್ಹಾಪುರಕ್ಕೆ ಕರೆತರಲು ಸಿದ್ಧತೆ ನಡೆಸಲಾಗಿದೆ.

ಮಹಾರಾಷ್ಟ್ರದ ವಾಲ್ಧುನಿ ನದಿ ಪ್ರದೇಶದಲ್ಲಿ ಹೆಚ್ಚಿನ ಮಳೆಯಾದ ಪರಿಣಾಮ ನದಿ ಉಕ್ಕಿ ಹರಿಯುತ್ತಿದ್ದು, ಹಲವು ಪ್ರದೇಶಗಳು ಜಲಾವೃತಗೊಂಡಿದೆ. ಮುಂಬೈ ಸುತ್ತ ಮುತ್ತ ಉತ್ತಮ ಮಳೆಯಾಗುವ ನಿರೀಕ್ಷೆ ಇದ್ದು, ಈಗಾಗಲೇ ಹಲವು ರೈಲು ಹಾಗೂ ವಿಮಾನಗಳ ಸಮಯ ಬದಲಾಗಿದೆ ಎಂಬ ಮಾಹಿತಿ ಲಭಿಸಿದೆ.

Comments

Leave a Reply

Your email address will not be published. Required fields are marked *