ಹಿರಿಯ ವೈದ್ಯರ ಕಿರುಕುಳದಿಂದಾಗಿ ವೈದ್ಯೆ ಆತ್ಮಹತ್ಯೆ

ಮುಂಬೈ: ಹಿರಿಯ ವೈದ್ಯರ ಕಿರುಕುಳ ತಾಳಲಾರದೇ ಯುವ ವೈದ್ಯೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಹಾರಾಷ್ಟ್ರದ ಮುಂಬೈನಲ್ಲಿ ನಡೆದಿದೆ.

ಪಾಯಲ್ ಸಲ್ಮಾನ್ ತಾದ್ವಿ (23) ಆತ್ಮಹತ್ಯೆ ಮಾಡಿಕೊಂಡ ವೈದ್ಯೆ. ಪಾಯಲ್ ಜೈನೋಕಾಲೋಜಿ ಓದುತ್ತಿದ್ದು, ಮಾರ್ಚ್ 22ರಂದು ಬಿವೈಎಲ್ ನಾಯರ್ ಆಸ್ಪತ್ರೆ ಬಳಿಯಿರುವ ತನ್ನ ರೂಮಿನಲ್ಲಿ ಶವವಾಗಿ ಪತ್ತೆಯಾಗಿದ್ದರು.

ಮೂವರು ಹಿರಿಯ ವೈದ್ಯರಾದ ಹೇಮಾ ಅಹುಜಾ, ಭಕ್ತಿ ಮೆಹರ್ ಹಾಗೂ ಅಂಕಿತಾ ಕಂಡಿವಾಲ್ ಜಾತಿ ಹೆಸರು ಹೇಳಿ ಪಾಯಲ್‍ರಿಗೆ ಕಿರುಕುಳ ನೀಡುತ್ತಿದ್ದರು. ವೈದ್ಯರ ಕಿರುಕುಳ ತಾಳಲಾರದೇ ಪಾಯಲ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸದ್ಯ ಮಹಾರಾಷ್ಟ್ರ ಅಸೋಸಿಯೆಶನ್ ಆಫ್ ರೆಸಿಡೆಂಟ್ ಡಾಕ್ಟರ್ ಮೂವರು ವೈದ್ಯರ ಮೆಂಬರ್ ಶಿಪ್ ಕ್ಯಾನ್ಸಲ್ ಮಾಡಿದೆ.

ಈ ಪ್ರಕರಣದ ಬಗ್ಗೆ ಎಫ್‍ಐಆರ್ ದಾಖಲಾಗಿದೆ. ಮೂವರು ಆರೋಪಿಗಳು ಪ್ರಕರಣ ಎದುರಿಸುತ್ತಿದ್ದಾರೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಮೇಲೆ ದೌರ್ಜನ್ಯವೆಸಗಿದ್ದಕ್ಕೆ ಯಾವುದೇ ಜಾಮೀನು ಸಿಗುವುದಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿ ದೀಪಕ್ ಕುಂದಾಲ್ ತಿಳಿಸಿದ್ದಾರೆ.

ಈ ಬಗ್ಗೆ ನನ್ನ ಮಗಳು ಆಡಳಿತ ಮಂಡಳಿಗೆ ದೂರು ನೀಡಿದ್ದಳು. ಆದರೆ ಆರೋಪಿಗಳ ವಿರುದ್ಧ ಆಡಳಿತ ಮಂಡಳಿ ಯಾವುದೇ ಕ್ರಮ ಕೈಗೊಳ್ಳದೇ ಕೇವಲ ಭರವಸೆಯನ್ನು ನೀಡಿದ್ದರು. ಆಡಳಿತ ಮಂಡಳಿಯ ಸದಸ್ಯರು ಲಿಖಿತ ರೂಪದಲ್ಲಿ ದೂರು ಸ್ವೀಕರಿಸಲು ನಿರಾಕರಿಸಿದ್ದರು ಎಂದು ಕ್ಯಾನ್ಸರ್ ನಿಂದ ಬಳಲುತ್ತಿರುವ ಪಾಯಲ್ ತಾಯಿ ಕಣ್ಣೀರು ಹಾಕುತ್ತಾರೆ.

ತಾನು ಪರಿಶಿಷ್ಟ ಪಂಗಡ ಜಾತಿಗೆ ಸೇರಿದೆ ಎಂದು ಮೂವರು ಹಿರಿಯ ವೈದ್ಯರು ತನಗೆ ಕಿರುಕುಳ ನೀಡುತ್ತಿದ್ದರು ಎಂದು ನನ್ನ ಮಗಳು ನನಗೆ ಫೋನ್ ಮಾಡಿದಾಗಲೆಲ್ಲಾ ಹೇಳುತ್ತಿದ್ದಳು. ಈಗ ನನ್ನ ಮಗಳ ಸಾವಿಗೆ ನ್ಯಾಯ ಬೇಕು ಎಂದು ಪಾಯಲ್ ತಾಯಿ ಒತ್ತಾಯಿಸಿದ್ದಾರೆ.

ಪಾಯಲ್ ಕಿರುಕುಳ ನೀಡಿದ್ದ ವೈದ್ಯರ ಬಗ್ಗೆ ಆಡಳಿತ ಮಂಡಳಿಗೆ ದೂರು ನೀಡಿದ್ದಾರೆ ಎಂದು ಹೇಳುತ್ತಿದ್ದಾರೆ. ಆದರೆ ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ ಎಂದು ಬಿವೈಎಲ್ ನಾಯರ್ ನ ಡೀನ್ ರಮೇಶ್ ಬರ್ಮಾಲ್ ತಿಳಿಸಿದ್ದಾರೆ.

ಈ ಆಸ್ಪತ್ರೆಯಲ್ಲಿ ಆಂಟಿ ರ‍್ಯಾಗಿಂಗ್ ಕಮಿಟಿ ರಚಿಸಲಾಗಿದೆ. ಮೂವರು ವೈದ್ಯರನ್ನು ಕರೆ ತರಲು ಹೇಳಿದ್ದೇವೆ. ಆದರೆ ಈಗ ಅವರು ಮುಂಬೈನಲ್ಲಿ ಇಲ್ಲ. ಈ ಬಗ್ಗೆ ಆಂಟಿ ರ‍್ಯಾಗಿಂಗ್ ಕಮಿಟಿ ಶೀಘ್ರದಲ್ಲೇ ವರದಿ ನೀಡಲಿದೆ ಎಂದು ಡೀನ್ ರಮೇಶ್ ಹೇಳಿದ್ದಾರೆ.

Comments

Leave a Reply

Your email address will not be published. Required fields are marked *