16 ಬಾರಿ ಚೂರಿಯಿಂದ ಇರಿದು ಭಾವನಿಂದಲೇ ಗರ್ಭಿಣಿಯ ಬರ್ಬರ ಹತ್ಯೆ!

ಮುಂಬೈ: ಎರಡು ತಿಂಗಳ ಗರ್ಭಿಣಿಯನ್ನು ಆಕೆಯ ಭಾವನೇ ಚೂರಿಯಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿರೋ ಅಮಾನವೀಯ ಘಟನೆ ಮುಂಬೈ ಮಹಾನಗರಿಯಲ್ಲಿ ನಡೆದಿದೆ.

24 ವರ್ಷದ ನಿಕಾತ್ ಶೇಖ್ ಮೃತ ದುರ್ದೈವಿ ಗರ್ಭಿಣಿಯಾಗಿದ್ದು, ಹಲ್ಲೆ ಮಾಡುವಾಗ ಇವರನ್ನು ರಕ್ಷಿಸಲು ಬಂದ ಗೆಳತಿಗೂ ಗಾಯಗಳಾಗಿವೆ ಎಂಬುದಾಗಿ ನಲಸೊಪರ ಪೊಲೀಸರು ತಿಳಿಸಿದ್ದಾರೆ.

ಏನಿದು ಘಟನೆ?: ಮೃತ ಮಹಿಳೆ ಮತ್ತು ಆಕೆಯ ಗಂಡ ತಕಿಪಡದ ಅಪಾರ್ಟ್ ಮೆಂಟ್ ನಲ್ಲಿ ವಾಸವಾಗಿದ್ದರು. ಮಹಿಳೆಯ ಪತಿ ಟ್ಯಾಕ್ಸಿ ಚಾಲಕನಾಗಿ ಕೆಲಸ ಮಾಡುತ್ತಿದ್ದನು. ನಿಕಾತ್ ಶೇಖ್ 2 ತಿಂಗಳ ಗರ್ಭಿಣಿಯಾಗಿದ್ದಳು. ಈಕೆಯ ಮನೆಯ ಎದುರಿನ ಫ್ಲಾಟ್ ನಲ್ಲಿ ಗೆಳತಿ 22 ವರ್ಷದ ನೊರಿ ಪರ್ವೀನ್ ಮೊಹಮ್ಮದ್ ಶೇಕ್ ಎಂಬಾಕೆ ವಾಸವಾಗಿದ್ದಳು. ಸೋಮವಾರ ಮಧ್ಯಾಹ್ನ ನಿಕಾತ್ ಮನೆಯಲ್ಲಿದ್ದ ಸಂದರ್ಭದಲ್ಲಿ ಭಾವ ಸಲ್ಮಾನ್ ಎಂಬಾತ ಏಕಾಏಕಿ ಮನೆಗೆ ನುಗ್ಗಿ ನಿಕಾತ್ ಳನ್ನು ಮನೆಯಿಂದ ಹೊರಗೆಳೆದು ಚಾಕುವಿನಿಂದ ಇರಿಯಲು ಪ್ರಯತ್ನಿಸಿದ್ದಾನೆ. ಈ ವೇಳೆ ನಿಕಾತ್ ಅಲ್ಲಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಆದರೆ ಆಕೆಯನ್ನು ಬಿಡದೆ ಬೆನ್ನಟ್ಟಿದ ಆರೋಪಿ ನಿಕಾತ್ ಮೇಲೆ 16 ಬಾರಿ ಚಾಕುವಿನಿಂದ ಇರಿದಿದ್ದಾನೆ. ಈ ವೇಳೆ ಘಟನೆಯನ್ನು ತಡೆಯಲು ಹೋದ ಗೆಳತಿ ನೊರಿ ಪರ್ವಿನ್ ಕೈ ಬೆರಳನ್ನು ಸೀಳಿ ಸ್ಥಳದಿಂದ ಪರಾರಿಯಾಗಿದ್ದಾನೆ ಎಂಬುದಾಗಿ ಪತ್ರಕ್ಷದರ್ಶಿಯೊಬ್ಬರು ಹೇಳಿರುವುದಾಗಿ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಇದೊಂದು ಪೂರ್ವಯೋಜಿತ ಕೃತ್ಯವಾಗಿದೆ. ಆಕೆಯ ಗಂಡನ ಮನೆಯವರೇ ನನ್ನ ಸಹೋದರಿಯನ್ನು ಕೊಲೆಮಾಡಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ಅತ್ತೆ ನಿಕಾತ್ ಮನೆ ತೊರೆದು ಮತ್ತೊಬ್ಬ ಮಗನ ಜೊತೆಯಿದ್ದರು. ಅಲ್ಲದೇ ಕೆಲ ತಿಂಗಳ ಹಿಂದೆಯಿಂದ ನಿಕಾತ್ ಗೆ ವರದಕ್ಷಿಣೆ ಕಿರುಕುಳವನ್ನು ನೀಡುತ್ತಿದ್ದು, ಈ ಕುರಿತು ಪತಿ ಹಾಗೂ ಆತನ ಮನೆಯವರ ವಿರುದ್ಧ ಪ್ರಕರಣ ದಾಖಲಿಸಿದ್ದೆವು ಅಂತ ನಿಕಾತ್ ಸಹೋದರ ಪೊಲಿಸರಿಗೆ ತಿಳಿಸಿದ್ದಾರೆ.

ಸದ್ಯ ನಿಕಾತ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಗಾಯಗೊಂಡ ಗೆಳತಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹಲ್ಲೆ ಹಾಗೂ ಕೊಲೆ ಎಂದು ಮೃತಳ ಬಾವ ಸಲ್ಮಾನ್ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ತಲೆ ಮರೆಸಿಕೊಂಡಿರೋ ಆರೋಪಿಗಾಗಿ ಇದೀಗ ಪೊಲೀಸರು ಬಲೆ ಬೀಸಿದ್ದಾರೆ. ಅಲ್ಲದೇ ಘಟನೆಗೆ ನಿಖರ ಕಾರಣವೇನು? ಯಾರೆಲ್ಲಾ ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂಬುವುದನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Comments

Leave a Reply

Your email address will not be published. Required fields are marked *