ಕಾರಿನೊಳಗೆ ಯುವ ಜೋಡಿ ಆತ್ಮಹತ್ಯೆಗೆ ಶರಣು!

ಮುಂಬೈ: ಯುವ ಜೋಡಿಯ ಮೃತ ದೇಹ ಕಾರಿನೊಳಗೆ ಪತ್ತೆಯಾಗಿರುವ ಘಟನೆ ಮುಂಬೈ ನಗರದಲ್ಲಿ ನಡೆದಿದೆ.

ಈ ಘಟನೆ ಮುಂಬೈನ ಉಪನಗರ ಮುಲಾಂದ್ ಬಳಿಯ ಕಾರ್ ಪಾರ್ಕ್ ನಲ್ಲಿ ನಡೆದಿದ್ದು, ಮೃತಪಟ್ಟವರನ್ನು ಸಲ್ಮಾನ್ ಅಫ್ರೋಜ್ ಆಲಮ್ ಖಾನ್(26) ಹಾಗೂ ಮನಿಶಾ ನೆಗಿಲ್(21) ಎಂದು ಗುರುತಿಸಲಾಗಿದೆ. ಈ ಜೋಡಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಕಾರಿನಲ್ಲಿ ಯಾವುದೇ ಡೆತ್ ನೋಟ್ ಪತ್ತೆಯಾಗಿಲ್ಲ. ಆದರೆ ಇವರಿಬ್ಬರು ಬೇರೆ ಬೇರೆ ಧರ್ಮಿಯವರಾಗಿದ್ದು, ಮನೆಯಲ್ಲಿ ಇವರ ಪ್ರೀತಿಗೆ ವಿರೋಧ ವ್ಯಕ್ತ ಪಡಿಸಿದ ಹಿನ್ನೆಲೆಯಲ್ಲಿ ಇಬ್ಬರು ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

ಮುಲಾಂದ್ ಬಳಿಯ ಪಾರ್ಕ್ ನಲ್ಲಿ ಕಾರಿನ ಎಂಜಿನ್ ಚಾಲನೆಯಲ್ಲಿದ್ದು, ಕಾರಿನ ದೀಪಗಳು ಉರಿಯುತ್ತಿದ್ದನ್ನು ಅಲ್ಲಿನ ನಿವಾಸಿಗಳು ಗಮನಿಸಿದ್ದಾರೆ. ನಂತರ ಅವರು ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಬಂದು ಕಾರಿನ ಬಾಗಿಲನ್ನು ಒಡೆದು ಹಾಕಿದ್ದಾರೆ. ಆಗ ಕಾರಿನಲ್ಲಿ ಖಾನ್ ಹಾಗೂ ಮನಿಶಾ ನೆಗಿಲ್ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ಕೂಡಲೇ ಅವರನ್ನು ಪೊಲೀಸರು ಸಮೀಪದ ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೆ ಅಷ್ಟರಲ್ಲಿಯೇ ಅವರಿಬ್ಬರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಪೊಲೀಸರು ಈ ಘಟನೆ ಬಗ್ಗೆ ತನಿಖೆ ಕೈಗೊಂಡಿದ್ದು, ಮುಲುಂದ್ ನಿವಾಸಿದ್ದ ಖಾನ್ ಮತ್ತು ನವಿ ಮುಂಬಯಿಯಲ್ಲಿ ವಾಸವಾಗಿದ್ದ ನೆಗಿಲ್ ಇಬ್ಬರು ನಾಲ್ಕು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದರು. ಇವರಿಬ್ಬರು ಮದುವೆಯಾಗಲು ಬಯಸಿದ್ದರು. ಆದರೆ ಇವರ ಮದುವೆಗೆ ಕುಟುಂಬದವರು ವಿರೋಧ ವ್ಯಕ್ತ ಪಡಿಸಿದ್ದಾರೆ ಎಂದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ ಅಂತಾ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮದುವೆ ಬಗ್ಗೆ ಅಸಮಾಧಾನಗೊಂಡು ಈ ಜೋಡಿ ಕಾರಿನಲ್ಲಿ ಕುಳಿತು ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸದ್ಯಕ್ಕೆ ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆಯನ್ನು ಮುಂದುವರೆಸಿದ್ದೇವೆ ಎಂದು ಅಧಿಕಾರಿ ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *