ಒಂದೇ ಕುಟುಂಬದ 12 ಜನಕ್ಕೆ ಕೊರೊನಾ ಪಾಸಿಟಿವ್

– ಮನೆ ಮಂದಿಯೆಲ್ಲಾ ಆಸ್ಪತ್ರೆಗೆ ದಾಖಲು

ಮುಂಬೈ: ಒಂದೇ ಕುಟುಂಬದ 12 ಜನರಿಗೆ ಕೊರೊನಾ ವೈರಸ್ ಪಾಸಿಟಿವ್ ಬಂದಿರುವ ಘಟನೆ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಇಸ್ಲಾಂಪುರ ನಡೆದಿದೆ.

ಈ ಕುಟುಂಬದ ನಾಲ್ಕು ಜನಕ್ಕೆ ಮೊದಲು ಕೊರೊನಾ ವೈರಸ್ ಇರುವುದು ದೃಢಪಟ್ಟಿತ್ತು. ಅವರನ್ನು ಮಾರ್ಚ್ 19ರಂದು ಮೀರಾಜ್‍ನ ಸಿವಿಲ್ ಆಸ್ಪತ್ರೆಗೆ ದಾಖಲು ಮಾಡಿ ಐಸೋಲೇಷನ್ ವಾರ್ಡಿನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಈ ನಾಲ್ವರು ಸೌದಿ ಅರೇಬಿಯಾದಲ್ಲಿರುವ ಹಜ್‍ಗೆ ಭೇಟಿ ನೀಡಿ ವಾಪಸ್ ಬಂದಿದ್ದರು ಎಂದು ತಿಳಿದು ಬಂದಿತ್ತು.

ಮಾರ್ಚ್ 21ರಂದು ಇದೇ ಕುಟುಂಬದ ಇನ್ನೂ ಐವರನ್ನು ಪರೀಕ್ಷೆಗೆ ಒಳಪಡಿಸಿದಾಗ ಕೊರೊನಾ ವೈರಸ್ ಪಾಸಿಟಿವ್ ಬಂದಿತ್ತು. ಇದಾದ ನಂತರ ಗುರುವಾರ ಇದೇ ಕುಟುಂಬದ ಉಳಿದ ಮೂವರಿಗೂ ಕೊರೊನಾ ವೈರಸ್ ಇರುವುದು ಪರೀಕ್ಷೆ ನಡೆಸಿದಾಗ ದೃಢಪಟ್ಟಿದೆ. ಈ ಮೂಲಕ ಮೊದಲ ನಾಲ್ಕು ಜನ ಮತ್ತು ನಂತರ ಐದು ಜನ ನೆನ್ನೆ ಮೂರು ಜನರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಈ ಮೂಲಕ ಒಂದೇ ಕುಟುಂಬದ 12 ಜನ ಕೊರೊನಾದಿಂದ ಆಸ್ಪತ್ರೆ ಸೇರಿದ್ದಾರೆ.

ಈ 12 ಜನರಲ್ಲಿ 11 ಜನ ಮೂಲತಃ ಸಾಂಗ್ಲಿ ಜಿಲ್ಲೆಯ ಇಸ್ಲಾಂಪುರದವರಾಗಿದ್ದು, ಇದೇ ಕುಟುಂಬದ ಮತ್ತೋರ್ವ ಹೆಣ್ಣು ಮಗಳು ಮದುವೆಯಾಗಿ ಕೊಲ್ಹಾಪುರ ಜಿಲ್ಲೆಯ ಪೆಥ್ವಾಡ್ಗಾಂವ್ ಊರಲ್ಲಿ ಇದ್ದರು. ಆದರೆ ಕುಟುಂಬವರು ಹಜ್‍ಗೆ ಹೋಗಿ ಬಂದಿದ್ದಾರೆ ಎಂದು ಆಕೆಯು ಕೂಡ ತವರು ಮನೆಗೆ ಬಂದು ಹೋಗಿದ್ದಳು. ಈ ಕಾರಣದಿಂದ ಆಕೆಗೆ ಕೂಡ ವೈರಸ್ ತಗುಲಿದ್ದು, ಆಕೆಯೂ ಈಗ ಆಸ್ಪತ್ರೆ ಪಾಲಾಗಿದ್ದಾರೆ.

ಈ ವಿಚಾರದ ಬಗ್ಗೆ ಮಾತನಾಡಿರುವ ಸಾಂಗ್ಲಿ ಜಿಲ್ಲೆಯ ಆರೋಗ್ಯಾಧಿಕಾರಿ ಸಂಜಯ್ ಸಲುಂಖೆ, ಈ ಕೊರೊನಾ ಪೀಡಿತ ಕುಟುಂಬದ ಜೊತೆ ಸಂಪರ್ಕದಲ್ಲಿ ಇದ್ದ ಅವರ 11 ಜನ ಸಂಬಂಧಿಕರ ಬ್ಲಡ್ ಸ್ಯಾಂಪಲ್ ಅನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಆ ವರದಿಯ ಫಲಿತಾಂಶ ನಮಗೆ ಇಂದು ಸಂಜೆ ಸಿಗುತ್ತದೆ. ನಮ್ಮ ಇನ್ನೊಂದು ವೈದ್ಯರ ತಂಡವನ್ನು ಇಸ್ಲಾಂಪುರ ಕಳುಹಿಸಿದ್ದೇವೆ. ಅವರು ಆ ಗ್ರಾಮದಲ್ಲಿ ಈ ಕುಟುಂಬದ ಜೊತೆ ನಿರಂತರ ಸಂಪರ್ಕದಲ್ಲಿದ್ದ 23 ಜನರ ಬ್ಲಡ್ ಸ್ಯಾಂಪಲ್ ತರುತ್ತಿದ್ದಾರೆ. ಈ 23 ಜನರನ್ನು ಆಗಾಲೇ ಹೋಂ ಕ್ವಾರೆಂಟೈನ್‍ನಲ್ಲಿ ಇಡಲಾಗಿದೆ ಎಂದು ತಿಳಿಸಿದ್ದಾರೆ.

ಮೊದಲು ಈ ಕುಟುಂಬದ ನಾಲ್ಕು ಜನರಲ್ಲಿ ಕೊರೊನಾ ಪಾಸಿಟಿವ್ ಬಂದ ತಕ್ಷಣ ಅವರ ಕುಟುಂಬದ 27 ಜನರನ್ನು ಹೋಂ ಕ್ವಾರೆಂಟೈನ್‍ನಲ್ಲಿ ಇಡಲಾಗಿತ್ತು. ಈ 27 ಜನರಲ್ಲಿ 7 ಜನರ ಸ್ಯಾಂಪಲ್ ಅನ್ನು ಮಾರ್ಚ್ 23ರಂದು ಪರೀಕ್ಷೆಗೆ ಕಳುಹಿಸಲಾಗಿತ್ತು. ಅವರಲ್ಲಿ ಐವರಿಗೆ ಪಾಸಿಟಿವ್ ಬಂದರೆ ಇಬ್ಬರಿಗೆ ನೆಗೆಟಿವ್ ಬಂದಿತ್ತು. ಈಗ ಈ ಕುಟುಂಬದ 12 ಜನರನ್ನು ಮೀರಾಜ್‍ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತದೆ. ಇಸ್ಲಾಂಪುರ ಗ್ರಾಮವನ್ನು ಸಂಪೂರ್ಣ ಲಾಕ್‍ಡೌನ್ ಮಾಡಲಾಗಿದೆ ಎಂದು ಸಲುಂಖೆ ಮಾಹಿತಿ ನೀಡಿದ್ದಾರೆ.

Comments

Leave a Reply

Your email address will not be published. Required fields are marked *