ಮುಂಬೈ ದಾಳಿಕೋರ ರಾಣಾ ತನ್ನ ಪ್ರಜೆಯಲ್ಲ – ದಿಢೀರ್‌ ಪಾಕ್‌ ಸ್ಪಷ್ಟನೆ

ಇಸ್ಲಾಮಾಬಾದ್‌: ಮುಂಬೈ ದಾಳಿಯ (Mumbai Attack) ಉಗ್ರ ತಹವ್ವೂರ್ ರಾಣಾ (Tahawwur Rana) ತನ್ನ ಪ್ರಜೆಯಲ್ಲ, ಆತ ಕೆನಡಾದ (Canada) ಪ್ರಜೆ ಎಂದು ಪಾಕಿಸ್ತಾನ (Pakistan) ಹೇಳಿದೆ.

ಅಮೆರಿಕದಿಂದ ರಾಣಾನನ್ನು ಭಾರತ ಕರೆ ತರುತ್ತಿದ್ದಂತೆ ಪಾಕಿಸ್ತಾನ ವಿದೇಶಾಂಗ ಸಚಿವಾಲಯ ಅಂತರ ಕಾಯ್ದುಕೊಳ್ಳಲು ಮುಂದಾಗಿದೆ. ಆತ ತನ್ನ ಹೆಸರನ್ನು ಹೇಳಬಹುದು ಎಂಬ ಭಯದಿಂದ ಇಲ್ಲಿಯವರೆಗೆ ಯಾವುದೇ ಪ್ರತಿಕ್ರಿಯೆ ನೀಡದ ಪಾಕ್‌ ಈಗ ದಿಢೀರ್‌ ಸ್ಪಷ್ಟೀಕರಣ ನೀಡಿದೆ.

ಈ ಸಂಬಂಧ ವಾರದ ಮಾಧ್ಯಮ ಸುದ್ದಿಗೋಷ್ಠಿಯಲ್ಲಿ ವಿದೇಶಾಂಗ ಇಲಾಖೆ, ರಾಣಾ ಎರಡು ದಶಕಗಳಿಗೂ ಹೆಚ್ಚು ಕಾಲ ತನ್ನ ಪೌರತ್ವವನ್ನು ನವೀಕರಿಸದ ಕಾರಣ ಆತ ಪಾಕಿಸ್ತಾನಿ ಪ್ರಜೆಯಲ್ಲ ಎಂದು ಹೇಳಿದೆ. ಇದನ್ನೂ ಓದಿ: ಬಾಂಬ್‌ ದಾಳಿಗೂ ಜಗ್ಗಲ್ಲ – ಮುಂಬೈ ದಾಳಿಕೋರನನ್ನ ಕರೆತರಲು ಸಿದ್ಧವಾಯ್ತು NIA ಬುಲೆಟ್ ಪ್ರೂಫ್ ಕಾರು

ಕಳೆದ ಎರಡು ದಶಕಗಳಿಂದ ತಹವ್ವೂರ್ ರಾಣಾ ತನ್ನ ಪಾಕಿಸ್ತಾನಿ ದಾಖಲೆಗಳನ್ನು ನವೀಕರಿಸಿಲ್ಲ. ಇದರಿಂದ ಆತ ಕೆನಡಾ ಪ್ರಜೆ ಎನ್ನುವುದು ಸ್ಪಷ್ಟವಾಗಿದೆ ಎಂದು ತಿಳಿಸಿದೆ.

ಗುಪ್ತಚರ ವರದಿಗಳ ಪ್ರಕಾರ, ರಾಣಾ ಪಾಕಿಸ್ತಾನದ ಐಎಸ್‌ಐ ಜೊತೆ ಆಳವಾದ ಸಂಪರ್ಕ ಹೊಂದಿದ್ದ ಮತ್ತು ಪಾಕ್‌ ಸೇನೆಗೆ ಬೆಂಬಲ ನೀಡಿದ್ದ. ಮುಂಬೈ ದಾಳಿಯ ಸಂಚು ರೂಪಿಸುವಲ್ಲಿ ಪಾಕಿಸ್ತಾನದ ನೇರ ಪಾತ್ರದ ಬಗ್ಗೆ ರಾಣಾ ಬಹಿರಂಗ ಪಡಿಸುವ ಸಾಧ್ಯತೆಯಿದೆ.

ಐಎಸ್‌ಐ ಭಾಗಿಯಿಂದ ಹಿಡಿದು ಲಷ್ಕರ್-ಎ-ತೊಯ್ಬಾದ ಜೊತೆಗಿನ ಸಮನ್ವಯದವರೆಗಿನ ಸಂಪೂರ್ಣ ಜಾಲವನ್ನು ರಾಣಾ ಬಹಿರಂಗಪಡಿಸುವ ಸಾಧ್ಯತೆಯಿದೆ.

ಹೆಡ್ಲಿ ಮತ್ತು ಲಷ್ಕರ್ ಜೊತೆ ರಾಣಾ ಸಂಪರ್ಕ
ದಾಳಿಯ ಮೊದಲು ಮುಂಬೈ ಸ್ಥಳಗಳ ಮೇಲೆ ದಾಳಿ ನಡೆಸಿದ್ದ ಪಾಕಿಸ್ತಾನಿ-ಅಮೆರಿಕನ್ ಭಯೋತ್ಪಾದಕ ಡೇವಿಡ್ ಕೋಲ್ಮನ್ ಹೆಡ್ಲಿಯೊಂದಿಗಿನ ನಿಕಟ ಸಂಬಂಧದಿಂದಾಗಿ ರಾಣಾ ಹೆಸರು ಮುನ್ನೆಲೆಗೆ ಬಂದಿತ್ತು.

ತಹಾವೂರ್ ರಾಣಾ ಯಾರು?
ತಹಾವೂರ್ ರಾಣಾ ಪಾಕಿಸ್ತಾನ ಮೂಲದ ಕೆನಡಾದ ಉದ್ಯಮಿ. ತನ್ನ ಬಾಲ್ಯದ ಗೆಳೆಯ ಡೇವಿಡ್ ಕೋಲ್ಮನ್ ಹೆಡ್ಲಿ, ದಾವೂದ್ ಗಿಲಾನಿ ಮತ್ತು ಇತರರಿಗೆ ಸಹಕರಿಸಿದ್ದ. ಈ ಮೂಲಕ ಮುಂಬೈನಲ್ಲಿ ಲಷ್ಕರ್ ಭಯೋತ್ಪಾದಕ ದಾಳಿಯ ಯೋಜನೆ ಮತ್ತು ಕಾರ್ಯಗತಗೊಳಿಸಿದ್ದ.

ರಾಣಾ ನವೆಂಬರ್ 11 ಮತ್ತು 21, 2008 ರ ನಡುವೆ ದುಬೈ ಮೂಲಕ ಮುಂಬೈಗೆ ಬಂದಿದ್ದ. ಪೊವೈನಲ್ಲಿರುವ ಹೋಟೆಲ್ ರಿನೈಸಾನ್ಸ್‌ನಲ್ಲಿ ತಂಗಿ ದಾಳಿಗೆ ಬೇಕಾದ ಸಿದ್ಧತೆ ಪರಿಶೀಲಿಸಿದ್ದ. ಈತ ದುಬೈಗೆ ಹೋದ 5 ದಿನಗಳ ಬಳಿಕ ದಾಳಿ ನಡೆದಿತ್ತು.

ಭಾರತವು ಜೂನ್ 2020 ರಲ್ಲಿ ರಾಣಾನನ್ನು ಗಡೀಪಾರುಗಾಗಿ ಕಾನೂನು ಪ್ರಕ್ರಿಯೆಯನ್ನು ಪ್ರಾರಂಭಿಸಿತು. ಈ ವರ್ಷದ ಫೆಬ್ರವರಿಯಲ್ಲಿ, ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಾಣಾನನ್ನು ಗಡೀಪಾರು ಮಾಡಲಾಗುವುದು ಎಂದು ದೃಢಪಡಿಸಿದ್ದರು.

ಮುಂಬೈ ದಾಳಿ:
2008 ರ ನವೆಂಬರ್ 26 ರಂದು ಪಾಕಿಸ್ತಾನದಿಂದ ಸಮುದ್ರ ಮಾರ್ಗದ ಮೂಲಕ ಭಾರತದ ಆರ್ಥಿಕ ರಾಜಧಾನಿ ಮುಂಬೈಗೆ 10 ಲಷ್ಕರ್-ಎ-ತೈಬಾ ಭಯೋತ್ಪಾದಕರು ಪ್ರವೇಶಿಸಿದ್ದರು. ಭಯೋತ್ಪಾದಕರು ಸರಣಿ ಗುಂಡಿನ ದಾಳಿ ಮತ್ತು ಬಾಂಬ್ ಸ್ಫೋಟಗಳನ್ನು ನಡೆಸಿ 166 ಜನರನ್ನು ಕೊಂದಿದ್ದರು. 300 ಕ್ಕೂ ಹೆಚ್ಚು ಜನರನ್ನು ಗಾಯಗೊಳಿಸಿದ್ದರು. ಛತ್ರಪತಿ ಶಿವಾಜಿ ಟರ್ಮಿನಸ್ ರೈಲು ನಿಲ್ದಾಣ, ಕಾಮಾ ಆಸ್ಪತ್ರೆ, ನಾರಿಮನ್ ಹೌಸ್ ವ್ಯಾಪಾರ ಮತ್ತು ವಸತಿ ಸಂಕೀರ್ಣ, ಲಿಯೋಪೋಲ್ಡ್ ಕೆಫೆ, ತಾಜ್ ಹೋಟೆಲ್ ಮತ್ತು ಒಬೆರಾಯ್ ಟ್ರೈಡೆಂಟ್ ಹೋಟೆಲ್‌ಗಳಲ್ಲಿ ದಾಳಿ ನಡೆಸಲಾಗಿತ್ತು.