MUDA Case: ತಡರಾತ್ರಿವರೆಗೂ ದೇವರಾಜ್‌ ಮನೆಯಲ್ಲಿ ಇಡಿ ವಿಚಾರಣೆ

ಬೆಂಗಳೂರು: ಮುಡಾ (MUDA Case) ನಿವೇಶನ ಹಂಚಿಕೆ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಂಗೇರಿಯಲ್ಲಿರುವ ದೇವರಾಜ್‌ ನಿವಾಸದ ಮೇಲೆ ಶುಕ್ರವಾರ ದಾಳಿ ನಡೆಸಿದ್ದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತಡರಾತ್ರಿವರೆಗೂ ವಿಚಾರಣೆ ನಡೆಸಿದರು.

ಭೂ ಮಾಲೀಕ ದೇವರಾಜ್‌ ಮನೆ ಮೇಲೆ ದಾಳಿ ನಡೆಸಿದ್ದ ಇ.ಡಿ ಅಧಿಕಾರಿಗಳು ಮಧ್ಯರಾತ್ರಿ 12 ಗಂಟೆ ವರೆಗೂ ವಿಚಾರಣೆ ನಡೆಸಿದರು. ಈ ವೇಳೆ ಪ್ರಮುಖ ದಾಖಲೆಗಳ ಪರಿಶೀಲನೆ ಮಾಡಿದರು. ವಿಚಾರಣೆ ಬಳಿಕ ಹೊರಟು ನಿಂತ ಅಧಿಕಾರಿಗಳಿಗೆ ದೇವರಾಜ್‌ ಅವರು ಶೇಕ್‌ ಹ್ಯಾಂಡ್‌ ಮಾಡಿ ಕಳಿಸಿಕೊಟ್ಟರು.

ದೇವರಾಜ್ ಕುಟುಂಬಕ್ಕೆ ಮೈಸೂರಿನ ಜಾಮೀನು ಬಂದಿದ್ದು ಹೇಗೆ? ಅದರ ಮೂಲ ಯಾವುದು? ಅದನ್ನ ಯಾವಾಗ ಮಾರಾಟ ಮಾಡಿದ್ದು? ಹೀಗೆ ನಾನಾ ವಿಚಾರಗಳ ಬಗ್ಗೆ ಹಾಗೂ ದಾಖಲೆಗಳ‌ ಬಗ್ಗೆ ಇ.ಡಿ ಅಧಿಕಾರಿಗಳು ಸುದೀರ್ಘ ವಿಚಾರಣೆ ನಡೆಸಿದರು.

ಸಿಎಂ ವಿರುದ್ಧದ ಮುಡಾ ಹಗರಣ ಆರೋಪ ಪ್ರಕರಣದಲ್ಲಿ ಸೈಟ್‌ನ ಮೂಲ ಮಾಲೀಕ ದೇವರಾಜ್‌. ಲೋಕಾಯುಕ್ತ ದಾಖಲಿಸಿಕೊಂಡಿರುವ ದೂರಿನಲ್ಲಿ ಅವರು ಎ4 ಆರೋಪಿಯಾಗಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರ ಬಾಮೈದಾ ಮಲ್ಲಿಕಾರ್ಜುನ್‌ಗೆ ದೇವರಾಜ್‌ ಜಮೀನು ಮಾರಿದ್ದರು.