ಶಟ್ಲರ್ ಶ್ರೀಕಾಂತ್‍ಗೆ ಕೊಟ್ಟ ಮಾತು ಉಳಿಸಿಕೊಂಡ ಧೋನಿ!

ಹೈದರಾಬಾದ್: ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಭಾರತದ ಟಾಪ್ ಶಟ್ಲರ್ ಕಿಡಂಬಿ ಶ್ರೀಕಾಂತ್ ಅವರಿಗೆ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದು, ತಮ್ಮ ಹಸ್ತಾಕ್ಷರ ಹೊಂದಿರುವ ಬ್ಯಾಟನ್ನು ಉಡುಗೊರೆಯಾಗಿ ನೀಡಿದ್ದಾರೆ.

ಧೋನಿ ಹಸ್ತಾಕ್ಷರ ಹೊಂದಿರುವ ಬ್ಯಾಟನ್ನು ಟೀಂ ಇಂಡಿಯಾ ಆಯ್ಕೆ ಸಮಿತಿ ಮುಖ್ಯಸ್ಥ ಎಂಎಸ್‍ಕೆ ಪ್ರಸಾದ್ ಅವರು ಶ್ರೀಕಾಂತ್ ಅವರಿಗೆ ಹಸ್ತಾಂತರಿಸಿದ್ದಾರೆ. ಸದ್ಯ ವಿಶ್ವ ಬ್ಯಾಡ್ಮಿಂಟನ್ ನಲ್ಲಿ ನಾಲ್ಕನೇ ಶ್ರೇಯಾಂಕ ಹೊಂದಿರುವ ಶ್ರೀಕಾಂತ್, ಧೋನಿಯವರ ಕೊಡುಗೆ ಕಂಡು ಸಂತಸ ವ್ಯಕ್ತಪಡಿಸಿದ್ದಾರೆ.

ಅಂದಹಾಗೇ ಶ್ರೀಕಾಂತ್ ಈ ಹಿಂದೆ ಧೋನಿಯ ಬಳಿ ಬ್ಯಾಟ್ ಕೊಡುಗೆ ನೀಡುವಂತೆ ಕೇಳಿದ್ದರು. ಅದಕ್ಕೆ ಬ್ಯಾಡ್ಮಿಂಟನ್ ನಲ್ಲಿ ನಂ.1 ಸ್ಥಾನಕ್ಕೆ ತಲುಪಿದರೆ ಗಿಫ್ಟ್ ಕೊಡುವುದಾಗಿ ಧೋನಿ ಭರವಸೆ ನೀಡಿದ್ದರು. ಇದರಂತೆ ಕಳೆದ ಏಪ್ರಿಲ್ ನಲ್ಲಿ ಶ್ರೀಕಾಂತ್ ವಿಶ್ವ ಶ್ರೇಯಾಂಕ ಪಟ್ಟಿಯಲ್ಲಿ ನಂ.1 ಸ್ಥಾನ ಪಡೆದಿದ್ದರು. ಅಲ್ಲದೇ ಭಾರತದಿಂದ ಈ ಸಾಧನೆ ಮಾಡಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಯನ್ನು ಪಡೆದಿದ್ದರು. ಸದ್ಯ ಧೋನಿ ತಾವು ಕೊಟ್ಟ ಮಾತಿನಂತೆ ಶ್ರೀಕಾಂತ್ ಅವರಿಗೆ ಗಿಫ್ಟ್ ನೀಡಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಶ್ರೀಕಾಂತ್, ಧೋನಿ ಅವರು ಬ್ಯಾಟ್ ಗಿಫ್ಟ್ ನೀಡಿರುವುದು ಹೆಚ್ಚು ಸಂತಸ ತಂದಿದೆ. ಇದು ತನ್ನ ಜೀವನದ ಅತ್ಯಂತ ಸ್ಮರಣೀಯ ದಿನ ಎಂದು ತಿಳಿಸಿದ್ದಾರೆ.

ಸದ್ಯ ಹೈದರಾಬಾದ್ ನ ಗೋಪಿಚಂದ್ ಬ್ಯಾಡ್ಮಿಂಟನ್ ಆಕಾಡೆಮಿಯಲ್ಲಿ ತರಬೇತಿಯಲ್ಲಿ ನಿರತರಾಗಿರುವ ಶ್ರೀಕಾಂತ್ ಅವರಿಗೆ ಎಂಎಎಸ್‍ಕೆ ಪ್ರಸಾದ್ ಅವರು ಬ್ಯಾಟ್ ಹಸ್ತಾಂತರಿಸುವ ವೇಳೆ ಬ್ಯಾಡ್ಮಿಂಟನ್ ರಾಷ್ಟ್ರೀಯ ತಂಡದ ಕೋಚ್ ಗೋಪಿಚಂದ್, ಶ್ರೀಕಾಂತ್ ಅವರ ತಂದೆ ಕೆವಿಎಸ್ ಕೃಷ್ಣ ಸೇರಿದಂತೆ ಹಲವರು ಹಾಜರಿದ್ದರು.

Comments

Leave a Reply

Your email address will not be published. Required fields are marked *