ಮೈದಾನಕ್ಕೆ ನುಗ್ಗಿ ಪಾದ ಮುಟ್ಟಿ ನಮಸ್ಕರಿಸಿದ ಅಭಿಮಾನಿ; ಹೃದಯ ಶ್ರೀಮಂತಿಕೆ ಮೆರೆದ ಧೋನಿ – ವೀಡಿಯೋ ವೈರಲ್‌!

– ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭದ್ರತಾ ವೈಫಲ್ಯ

ಅಹಮದಾಬಾದ್‌: ಇತ್ತೀಚಿನ ದಿನಗಳಲ್ಲಿ ಅಭಿಮಾನಿಗಳ ಅತ್ಯುತ್ಸಾಹ ಭದ್ರತಾ ವೈಫಲ್ಯಗಳಿಗೆ ದಾರಿ ಮಾಡಿಕೊಡುತ್ತಿದೆ. ಅದೇ ರೀತಿ ಶುಕ್ರವಾರ ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ (Narendra Modi Stadium) ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವಿನ ಪಂದ್ಯದ ವೇಳೆ ಧೋನಿ ಅಭಿಮಾನಿಯೊಬ್ಬರು (MS Dhoni Fans) ದಿಢೀರ್‌ ಮೈದಾನಕ್ಕೆ ನುಗ್ಗಿದ್ದು, ಭದ್ರತಾ ವೈಫಲ್ಯಕ್ಕೆ ಕಾರಣವಾಗಿದೆ.

ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ಉಸಿರು ಯಾರು ಎಂದು ಕೇಳಿದರೆ ಪ್ರತಿಯೊಬ್ಬ ಕ್ರಿಕೆಟ್ ಅಭಿಮಾನಿಯೂ ನಿಸ್ಸಂಶಯವಾಗಿ ಧೋನಿ ಹೆಸರನ್ನೇ ಹೇಳುತ್ತಾರೆ. 42 ವರ್ಷದ ಮಹಿ, 2008ರಲ್ಲಿ ಐಪಿಎಲ್‌ ಆರಂಭವಾದಾಗಿನಿಂದ ಚೆನ್ನೈ ತಂಡದ ನಾಯಕನಾಗಿದ್ದಾರೆ. 2013ರಿಂದ 2 ವರ್ಷಗಳ ತಂಡವನ್ನು ಅಮಾನತುಗೊಳಿಸಿದ್ದು, ಹೊರತುಪಡಿಸಿ ಉಳಿದ ಎಲ್ಲ ಆವೃತ್ತಿಗಳಲ್ಲೂ ಚೆನ್ನೈ ತಂಡದ ಪರವಾಗಿಯೇ ಆಡಿದ್ದಾರೆ. ಈಗಲೂ ಆರೋಗ್ಯ ಸಮಸ್ಯೆಯಿದ್ದರೂ ಮಹಿ ತಮ್ಮ ಅಭಿಮಾನಿಗಳಿಗಾಗಿಯೇ ಆಡುತ್ತಿದ್ದಾರೆ.

ಶುಕ್ರವಾರ ನಡೆದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ (Gujarat Titans) ನಡುವಿನ ಐಪಿಎಲ್‌ ಪಂದ್ಯದ ವೇಳೆ ಅಭಿಮಾನಿಯೊಬ್ಬರು ಏಕಾಏಕಿ ಮೈದಾನಕ್ಕೆ ನುಗ್ಗಿದ್ದಾರೆ. ಎಂ.ಎಸ್ ಧೋನಿ ಅವರ ಪಾದಗಳನ್ನು ಮುಟ್ಟಿ, ತಮ್ಮ ತಲೆಯನ್ನು ನೆಲಕ್ಕೆ ಸ್ಪರ್ಶಿಸಿ ನಮಸ್ಕರಿಸಿದ್ದಾರೆ. ದಿಢೀರನೆ ಬಂದ ಅಭಿಮಾನಿ ಕಂಡು ಕ್ಷಣಿಕ ಬೆಚ್ಚಿದ ಮಹಿ ಬಳಿಕ ಅಭಿಮಾನಿಯನ್ನು ನಿಲ್ಲಿಸಿ, ಹೆಗಲ ಮೇಲೆ ಕೈಯಿಟ್ಟು ಮಾತನಾಡಿಸಿದ್ದಾರೆ, ಪ್ರೀತಿಯ ಅಪ್ಪುಗೆಯೊಂದಿಗೆ ಬೀಳ್ಕೊಟ್ಟಿದ್ದಾರೆ. ಬಳಿಕ ಭದ್ರತಾ ಸಿಬ್ಬಂದಿ ಅಭಿಮಾನಿಯನ್ನು ಎಳೆದೊಯ್ಯುವ ವೇಳೆ, ಅವರನ್ನು ಆರಾಮಾಗಿ ಹೋಗಲು ಬಿಡಿ ಎಂದು ಭದ್ರತಾ ಸಿಬ್ಬಂದಿಗೆ ಹೇಳಿದ್ದಾರೆ. ಮಹಿ ಅವರ ಈ ನಡೆ ಅಭಿಮಾನಿಗಳ ಹೃದಯಸ್ಪರ್ಶಿಸುವಂತೆ ಮಾಡಿದೆ. ಈ ಕುರಿತ ವೀಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ.

ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ್ದ ಗುಜರಾತ್‌ ಟೈಟಾನ್ಸ್‌ ಮೂರು ವಿಕೆಟ್‌ ನಷ್ಟಕ್ಕೆ 231 ರನ್‌ ಬಾರಿಸಿತ್ತು. 232 ರನ್‌ಗಳ ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ್ದ ಚೆನ್ನೈ 8 ವಿಕೆಟ್‌ ನಷ್ಟಕ್ಕೆ 196 ರನ್‌ ಗಳಿಸಿ ಸೋಲೊಪ್ಪಿಕೊಂಡಿತು. ಕೊನೆಯಲ್ಲಿ 236.36 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸಿದ ಮಹಿ, 11 ಎಸೆತಗಳಲ್ಲಿ 3 ಭರ್ಜರಿ ಸಿಕ್ಸರ್‌, 1 ಬೌಂಡರಿ ಸೇರಿ 26 ರನ್‌ ಚಚ್ಚಿದರು.