ಅಭ್ಯಾಸಕ್ಕಿಳಿದ ಧೋನಿ, ನೆಟ್ಸ್‌ನಲ್ಲಿ ಬೆವರಿಳಿಸಿದ ಟೀಂ ಇಂಡಿಯಾ ಆಟಗಾರರು!

ಹ್ಯಾಮಿಲ್ಟನ್: ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯನ್ನು ಕೈವಶ ಮಾಡಿ ಆತ್ಮವಿಶ್ವಾಸದಲ್ಲಿ ಇರುವ ಟೀಂ ಇಂಡಿಯಾ ಆಟಗಾರರು, 4ನೇ ಏಕದಿನ ಪಂದ್ಯಕ್ಕೆ ಸಿದ್ಧತೆ ನಡೆಸಿದ್ದಾರೆ. ಇತ್ತ ಗಾಯದ ಸಮಸ್ಯೆಯಿಂದ ಹಿಂದಿನ ಪಂದ್ಯಕ್ಕೆ ಅಲಭ್ಯರಾಗಿದ್ದ ಧೋನಿ ಚೇತರಿಸಿಕೊಂಡಿದ್ದು, ನೆಟ್ಸ್ ನಲ್ಲಿ ಬೆವರು ಹರಿಸಿದ್ದಾರೆ.

ಕೊಹ್ಲಿ ಅನುಪಸ್ಥಿತಿಯಲ್ಲಿ ತಂಡವನ್ನ ರೋಹಿತ್ ಶರ್ಮಾ ಮುನ್ನಡೆಸುತ್ತಿದ್ದು, ಸದ್ಯ ಧೋನಿ ಅಭ್ಯಾಸಕ್ಕೆ ಇಳಿದಿರುವುದು ಮತ್ತಷ್ಟು ಬಲ ತುಂಬಿದೆ. ಇತ್ತ ಹಾರ್ದಿಕ್ ಪಾಂಡ್ಯ 3ನೇ ಏಕದಿನ ಪಂದ್ಯಕ್ಕೆ ಕಮ್ ಬ್ಯಾಕ್ ಮಾಡಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಅಲ್ಲದೇ ಮುಂದಿನ ಪಂದ್ಯಕ್ಕೆ ವೇಗಿ ಖಲೀಲ್ ಅಹ್ಮದ್ ಅವರಿಗೆ ಅವಕಾಶ ಸಿಗುವ ಸಾಧ್ಯತೆ ಇದೆ.

ಇತ್ತ ತಂಡದ ನಾಯಕತ್ವ ವಹಿಸಿರುವ ರೋಹಿತ್ ಶರ್ಮಾ ಅವರಿಗೂ ಈ ಪಂದ್ಯ ಪ್ರಮುಖವಾಗಿದ್ದು, ವೃತ್ತಿ ಜೀವನದ 200ನೇ ಏಕದಿನ ಪಂದ್ಯವನ್ನು ಪೂರ್ಣಗೊಳಿಸಲಿದ್ದಾರೆ. ಈ ಪಟ್ಟಿಯಲ್ಲಿ ಭಾರತ ಪರ ಸಚಿನ್ 463 ಪಂದ್ಯಗಳ ಮೂಲಕ ಮೊದಲ ಸ್ಥಾನ ಪಡೆದಿದ್ದು, ಸದ್ಯ ತಂಡದಲ್ಲಿರುವ ಧೋನಿ 334 ಮತ್ತು ವಿರಾಟ್ ಕೊಹ್ಲಿ 222 ಏಕದಿನ ಪಂದ್ಯಗಳನ್ನ ಆಡಿದ್ದಾರೆ. ಹ್ಯಾಮಿಲ್ಟನ್ ಪಂದ್ಯವನ್ನು ಆಡುವ ಮೂಲಕ ರೋಹಿತ್ ಶರ್ಮಾ 200 ಏಕದಿನ ಪಂದ್ಯಗಳನ್ನು ಪೂರ್ಣಗೊಳಿಸಿದ 14 ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದ್ದಾರೆ.

ಇದುವರೆಗೂ ಟೀಂ ಇಂಡಿಯಾವನ್ನು 8 ಪಂದ್ಯಗಳಲ್ಲಿ ಮುನ್ನಡೆಸಿರುವ ರೋಹಿತ್ 7ರಲ್ಲಿ ಗೆಲುವು ಪಡೆದಿದ್ದು, ಕಿವೀಸ್ ವಿರುದ್ಧದ 4ನೇ ಪಂದ್ಯವನ್ನು ಗೆಲ್ಲುವ ಮೂಲಕ ತಮ್ಮ ಗೆಲುವಿನ ಅಭಿಯಾನವನ್ನು ಮುನ್ನಡೆಸುವ ವಿಶ್ವಾಸ ಹೊಂದಿದ್ದಾರೆ. ಅಲ್ಲದೇ ವೃತ್ತಿ ಜೀವನದಲ್ಲಿ 215 ಸಿಕ್ಸರ್ ಸಿಡಿಸಿರುವ ರೋಹಿತ್ ಗೆ ಧೋನಿರನ್ನು ಹಿಂದಿಕ್ಕಲು 1 ಸಿಕ್ಸರ್ ಅಗತ್ಯವಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *