ಎಂಎಸ್‍ಡಿ ನಿವೃತ್ತಿ ಘೋಷಿಸಿದ್ರೆ ಸಿಎಸ್‍ಕೆ ಮುಂದಿನ ನಡೆ ಏನು?

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್‍ನ 13ನೇ ಆವೃತ್ತಿಯಲ್ಲಿ ಎಂ.ಎಸ್.ಧೋನಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‍ಕೆ) ತಂಡವನ್ನು ಮುನ್ನಡೆಸಬೇಕಿತ್ತು. ಆದರೆ ಕೊರೊನಾ ವೈರಸ್ ಭೀತಿಯಿಂದಾಗಿ ಈ ಬಾರಿಯ ಟೂರ್ನಿಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ಲಾಕ್‍ಡೌನ್ ಅವಧಿಯಲ್ಲಿ ಕೆಲ ಕ್ರಿಕೆಟಿಗರು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದಾರೆ. ಅಂತೆ ಆಸ್ಟ್ರೇಲಿಯಾ ಮಾಜಿ ಕ್ರಿಕೆಟರ್ ಮೈಕೆಲ್ ಹಸ್ಸಿ ಅವರು, ಒಂದು ವೇಳೆ ಧೋನಿ ನಿವೃತ್ತಿ ಘೋಷಿಸಿದರೆ ಸಿಎಸ್‍ಕೆ ಮುಂದಿನ ನಡೆ ಏನು ಎಂಬುದರ ಬಗ್ಗೆ ವಿವರಿಸಿದ್ದಾರೆ.

2019ರ ಐಸಿಸಿ ವಿಶ್ವಕಪ್ ಟೂರ್ನಿಯ ಬಳಿಕ ಎಂ.ಎಸ್. ಧೋನಿ ಅವರ ಅಂತರರಾಷ್ಟ್ರೀಯ ಕ್ರಿಕೆಟ್ ಭವಿಷ್ಯವು ಇಕ್ಕಟ್ಟಿಗೆ ಸಿಲುಕಿದಂತಾಗಿದೆ. ಐಪಿಎಲ್‍ನಲ್ಲಿ ಉತ್ತಮ ಪ್ರದರ್ಶನದೊಂದಿಗೆ ಎಂಎಸ್‍ಡಿ ಟೀಂ ಇಂಡಿಯಾಗೆ ಮರಳಲಿದ್ದಾರೆ ಎಂಬ ನಿರೀಕ್ಷೆ ಅಭಿಮಾನಿಗಳಲ್ಲಿತ್ತು. ಆದರೆ ಕೊರೊನಾ ಭೀತಿಯಿಂದಾಗಿ ಐಪಿಎಲ್ ಮುಂದೂಡಲ್ಪಟ್ಟಿದೆ.

ಧೋನಿ ಅಂತಿಮವಾಗಿ ಎಲ್ಲಾ ರೀತಿಯ ಆಟಗಳಿಂದ ನಿವೃತ್ತಿ ಘೋಷಿಸುವ ಸನ್ನಿವೇಶವನ್ನು ವಿವರಿಸಿದ ಹಸ್ಸಿ, ಸಿಎಸ್‍ಕೆ ಧೋನಿ ಅವರನ್ನು ವಿಶೇಷ ಸ್ಥಾನದೊಂದಿಗೆ ತಂಡದಲ್ಲಿ ಉಳಿಸಿಕೊಳ್ಳಬಹುದು ಎಂದು ನಿರೀಕ್ಷಿಸುತ್ತೇನೆ ಎಂದು ಹೇಳಿದ್ದಾರೆ.

”ಎಂ.ಎಸ್.ಧೋನಿ ನಿವೃತ್ತಿಯ ನಿರ್ಧಾರದ ಬಗ್ಗೆ ನಾನು ಕುತೂಹಲದಿಂದ ನೋಡುತ್ತಿರುವೆ. ಧೋನಿ ಅವರನ್ನು ತಂಡದಲ್ಲಿ ತೊಡಗಿಸಿಕೊಳ್ಳಲು ಸಿಎಸ್‍ಕೆ ಮಾಲೀಕರು ಬಯಸುತ್ತಾರೆ ಎಂಬ ನಂಬಿಕೆ ಇದೆ” ಎಂದು ಹಸ್ಸಿ ವಿಡಿಯೋ ಕಾಲ್ ಮೂಲಕ ಟೀಂ ಇಂಡಿಯಾ ಮಾಜಿ ಕ್ರಿಕೆಟರ್ ಸಂಜಯ್ ಮಂಜ್ರೇಕರ್ ಅವರೊಂದಿಗೆ ಹಂಚಿಕೊಂಡಿದ್ದಾರೆ.

”ಆದಾಗ್ಯೂ ಆಟಗಾರರ ಬದಲಾವಣೆಯು ಸಂಭವಿಸಿದಾಗ, ಸಿಎಸ್‍ಕೆ ಹೊಸ ತಂಡವನ್ನು ಕಟ್ಟಲು ಬಯಸಬಹುದು. ಮುಂದಿನ ದಶಕದಲ್ಲಿ ಐಪಿಎಲ್ ಪ್ರವೇಶಿಸುವಾಗ ಧೋನಿ ಪ್ಲಾನ್‍ಗಳನ್ನು ಸಿಎಸ್‍ಕೆ ಬಳಸಿಕೊಳ್ಳಬಹುದು. ಇದು ಖಂಡಿತವಾಗಿಯೂ ಪ್ರಸ್ತುತ ಹೆಚ್ಚು ಸವಾಲಿನ ಸಂಗತಿಯಾಗಿದೆ” ಎಂದು ಹಸ್ಸಿ ಹೇಳಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಒಟ್ಟಿಗೆ ಕಾರ್ಯನಿರ್ವಹಿಸಿದಾಗ ಎಂಎಸ್‍ಡಿಯಿಂದ ಕಲಿತ ಕೆಲವು ವಿಚಾರಗಳನ್ನು ಹಸ್ಸಿ ಬಹಿರಂಗಪಡಿಸಿದ್ದಾರೆ. ”ಪಂದ್ಯದ ಆರಂಭದಲ್ಲಿ ಒಂದು ಓವರಿನಲ್ಲಿ 12 ಅಥವಾ 13 ರನ್‍ಗಳ ಚಚ್ಚಲು ನಾನು ಪ್ರಯತ್ನಿಸಲಿಲ್ಲ. ಇದನ್ನು ಎಂ.ಎಸ್. ಧೋನಿ ಅವರಿಂದ ಕಲಿತಿದ್ದೇನೆ. ರನ್ ಗಳಿಸುವುದರಲ್ಲಿಯೇ ಹೆಚ್ಚು ಗಮನಹಸಿರಿದರೆ ಬ್ಯಾಟ್ಸ್‌ಮನ್‌ ಭಯಭೀತರಾಗುತ್ತಾರೆ. ಹೀಗಾಗಿ ಪಂದ್ಯವನ್ನು ಗೆಲ್ಲಲು ಸಾಧ್ಯವಾಗುವುದಿಲ್ಲ ಎಂದು ಧೋನಿ ನಂಬಿಸಿದ್ದಾರೆ. ಆದ್ದರಿಂದ ಧೋನಿ ಕೂಲ್ ಆಗಿರುತ್ತಾರೆ ಮತ್ತು ಬೌಲರ್ ಗಳ ಮೇಲೂ ಒತ್ತಡ ಬೀಳದಂತೆ ನೋಡಿಕೊಳ್ಳುತ್ತಾರೆ” ಎಂದು ಹಸ್ಸಿ ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *