ಹಣಕ್ಕಾಗಿ ಹಿಟ್ಟನ್ನು ಬೆಡ್‍ಶೀಟ್‍ನಲ್ಲಿ ಸುತ್ತಿ ಶಿಶುವಿನ ಶವವೆಂದ ಮಹಿಳೆಯರು

ಭೋಪಾಲ್: ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಮೋಸ, ವಂಚನೆ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗೆಯೇ ಮಧ್ಯಪ್ರದೇಶದಲ್ಲಿ ನವಜಾತ ಶಿಶು ಸಾವನ್ನಪ್ಪಿದೆ ಎಂದು ಮಹಿಳೆಯರು ಹಿಟ್ಟನ್ನು ಬೆಡ್‍ಶೀಟಿನಲ್ಲಿ ಸುತ್ತಿ ತಂದು ಹಣ ಪಡೆಯಲು ಮುಂದಾದ ಘಟನೆ ನಡೆದಿದೆ.

ಕೈಲಾರ ಜಿಲ್ಲೆಯಲ್ಲಿ ಮೂವರು ಮಹಿಳೆಯರು ಹಿಟ್ಟನ್ನು ಬೆಡ್‍ಶೀಟ್‍ನಲ್ಲಿ ಸುತ್ತಿಕೊಂಡು ಬಂದು ನವಜಾತ ಶಿಶು ಮರಣ ಹೊಂದಿದೆ ಎಂದು ಸರ್ಕಾರಿ ಆಸ್ಪತ್ರೆಗೆ ಬಂದಿದ್ದರು. ಅಂಬುಲೆನ್ಸ್‌ನಲ್ಲಿ ಬಂದ ಮೂವರು ಮಹಿಳೆಯರು, ಅವರಲ್ಲಿ ಓರ್ವ ಮಹಿಳೆಗೆ ಹೆರಿಗೆ ಆಗಿದೆ. ಆದರೆ ಶಿಶು ಮೃತಪಟ್ಟಿದೆ ಎಂದು ಆಸ್ಪತ್ರೆ ಸಿಬ್ಬಂದಿಗೆ ಹೇಳಿದ್ದಾರೆ. ನಂತರ ನೇರವಾಗಿ ಹೆರಿಗೆ ವಾರ್ಡಿಗೆ ಹೋಗಿ, ಸಿಎಂ ಹೆರಿಗೆ ನೆರವು ಯೋಜನೆಗೆ ಆಕೆಯ ಹೆಸರು ನೋಂದಣಿ ಮಾಡುವಂತೆ ಕೋರಿದ್ದಾರೆ.

ಈ ವೇಳೆ ಸಿಬ್ಬಂದಿ ಶಿಶುವನ್ನು ಪರೀಕ್ಷೆ ಮಾಡಬೇಕು ಎಂದು ಹೇಳಿದಾಗ, ನಮ್ಮ ಸಂಪ್ರದಾಯದಲ್ಲಿ ಮೃತಪಟ್ಟ ಮಗುವಿನ ಮುಖವನ್ನು ತೋರಿಸುವಂತಿಲ್ಲ ಎಂದು ಅವರ ಮುಂದೆ ಮೊಸಳೆ ಕಣ್ಣೀರು ಹಾಕಿದ್ದಾರೆ. ಮಹಿಳೆಯರ ವಿಚಿತ್ರ ವರ್ತನೆ ಕಂಡು ಅನುಮಾನಗೊಂಡ ವೈದರು ಮತ್ತು ಸಿಬ್ಬಂದಿ ಬಲವಂತವಾಗಿ ಮುಖಕ್ಕೆ ಮುಚ್ಚಿದ ಬಟ್ಟೆ ತೆಗೆದಾಗ ವಿಷಯ ಬಯಲಾಗಿದೆ. ಮಹಿಳೆಯರು ಹೊತ್ತು ತಂದಿದ್ದು ಶಿಶುವಲ್ಲ, ಹಿಟ್ಟು ಎಂಬ ವಿಚಾರ ತಿಳಿದಿದೆ. ವೈದ್ಯರನ್ನು ನಂಬಿಸಲು ಹಿಟ್ಟಿಗೆ ಕೆಂಪು ಪೇಂಟ್ ಮಾಡಿ, ನವಜಾತ ಶಿಶುವಿನ ರೀತಿ ಕಾಣುವಂತೆ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ.

ಆಗ ವೈದ್ಯರು ಪೊಲೀಸರನ್ನು ಸ್ಥಳಕ್ಕೆ ಕರೆಸಿ, ಮಹಿಳೆಯರ ವಂಚನೆ ಬಗ್ಗೆ ತಿಳಿಸಿದ್ದಾರೆ. ಈ ವೇಳೆ ಮತ್ತೆ ಮಹಿಳೆಯರು ಕಣ್ಣೀರಿಡುತ್ತಾ, ಸರ್ಕಾರದಿಂದ ಬರುವ 16 ಸಾವಿರ ಹಣಕ್ಕಾಗಿ ಈ ರೀತಿ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಬಳಿಕ ಮುಂದೆ ಈ ರೀತಿ ಮಾಡದಂತೆ ಎಚ್ಚರಿಕೆ ಕೊಟ್ಟು ಪೊಲೀಸರು ಅವರನ್ನು ಅಲ್ಲಿಂದ ಕಳುಹಿಸಿದ್ದಾರೆ.

ಈ ಬಗ್ಗೆ ಸ್ಥಳೀಯ ಜಿಲ್ಲಾ ವೈದ್ಯಾಧಿಕಾರಿ ಮಾತನಾಡಿ, ಈ ರೀತಿಯ ವಿಚಿತ್ರ ಪ್ರಕರಣ ಇದೇ ಮೊದಲ ಬಾರಿಗೆ ನೋಡಿದ್ದು, ಹಣಕ್ಕಾಗಿ ಜನ ಈ ಮಟಕ್ಕೆ ಇಳಿದು ಮೋಸ ಮಾಡುತ್ತಾರೆಂದು ತಿಳಿದಿರಲಿಲ್ಲ ಎಂದು ಹೇಳಿದ್ದಾರೆ.

Comments

Leave a Reply

Your email address will not be published. Required fields are marked *