ಉಡುಪಿ: ಪೇಜಾವರಶ್ರೀ ಮಲಗಿರುವುದನ್ನು ಕಂಡು ಮರುಕವಾಯ್ತು ಎಂದು ಸಂಸದ ತೇಜಸ್ವಿ ಸೂರ್ಯ ಅವರು ಪ್ರತಿಕ್ರಿಯಿಸಿದ್ದಾರೆ.
ಪೇಜಾವರಶ್ರೀಗಳನ್ನು ಭೇಟಿ ಮಾಡಿದ ಬಳಿಕ ಮಾತನಾಡಿದ ಅವರು, ಪೇಜಾವರ ಶ್ರೀಗಳು ಮಗುವಿನಂತೆ ಓಡಾಡುವುದನ್ನು ಕಂಡ ನನಗೆ ಈಗ ಮಲಗಿದ್ದನ್ನು ಕಂಡು ಬೇಸರವಾಗಿದೆ. ಶ್ರೀಗಳು ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ವಾಮೀಜಿ ಮಲಗಿರೋದನ್ನು ನಾವು ಯಾವತ್ತೂ ನೋಡಿಲ್ಲ. ವಿಶ್ವೇಶತೀರ್ಥರು ಮಗುವಿನಂತೆ ಓಡಾಡುವ ಸ್ವಾಮೀಜಿ. ಮಗುವಿನಂತಹ ಮುಗ್ಧತೆ, ಅದಮ್ಯ ಚೈತನ್ಯದವರು. ಸ್ವಾಮೀಜಿ ಮತ್ತಷ್ಟು ಧರ್ಮದ ಕೆಲಸ ಮಾಡುವಂತಾಗಲಿ. ವೈದ್ಯರ ಜೊತೆ ಮಾತನಾಡಿದ್ದೇನೆ. ಗುಣಮುಖರಾಗುವ ನಂಬಿಕೆಯಿದೆ ಎಂದರು.

ಶಾಸಕ ರವಿ ಸುಬ್ರಹ್ಮಣ್ಯ ಮಾತನಾಡಿ, ಅವರು ಯಾವತ್ತೂ ಹಾಸಿಗೆ ಹಿಡಿದವರಲ್ಲ. ಸ್ವಾಮೀಜಿ ಆದಷ್ಟು ಬೇಗ ಚೇತರಿಸುವಂತಾಗಲಿ. ಶ್ರೀಗಳು ಎಲ್ಲಾ ಧರ್ಮ, ಜಾತಿಗೆ ಬೇಕಾದವರು. ಅವರು ತುಳಿತಕ್ಕೆ ಒಳಗಾದವರ ಪರ ಇರುವ ಸ್ವಾಮೀಜಿ. ಆದಷ್ಟು ಬೇಗ ಮೊದಲಿನಂತೆ ಚಟುವಟಿಕೆಯಲ್ಲಿ ಪಾಲ್ಗೊಳ್ಳಲಿ. ರಾಮಮಂದಿರ ನಿರ್ಮಾಣ ಕಾಲದಲ್ಲಿ ಅವರು ಇರಬೇಕು. ಪೇಜಾವರಶ್ರೀ ರಾಮಮಂದಿರ ನೋಡುವಂತಾಗಲಿ ಎಂದರು.

ಕೆಎಂಸಿ ಆಸ್ಪತ್ರೆಗೆ ಉಡುಪಿಯ ಪುತ್ತಿಗೆ ಮಠಾಧೀಶ ಸುಗುಣೇಂದ್ರ ತೀರ್ಥ ಸ್ವಾಮೀಜಿ ಭೇಟಿ ಮಾಡಿದರು. ಪೇಜಾವರಶ್ರೀಗಳ ಆರೋಗ್ಯ ಯಥಾಸ್ಥಿತಿ ಇದೆ. ಉಸಿರಾಟ ನಡೆಯುತ್ತಿರುವುದನ್ನು ನಾನು ನೋಡಿದೆ. ಎಂಆರ್‍ಐ ರಿಪೋರ್ಟ್ ಗೆ ಎಲ್ಲರೂ ಕಾಯುತ್ತಿದ್ದಾರೆ. ಶ್ರೀಗಳ ಪ್ರಜ್ಞಾವಸ್ಥೆಯಲ್ಲಿ ಚೇತರಿಕೆ ಕಾಣಬೇಕಿದೆ. ಭಗವಂತನ ಅನುಗ್ರಹದಲ್ಲಿ ಚೇತರಿಕೆಯಾಗುವ ನಿರೀಕ್ಷೆಯಿದೆ. ದೇಶಾದ್ಯಂತ ಪೇಜಾವರಶ್ರೀ ಆರೋಗ್ಯ ವೃದ್ಧಿಗೆ ಪೂಜೆಗಳಾಗುತ್ತಿದೆ. ನಮ್ಮ ಮಠದಲ್ಲಿ ಕೂಡಾ ಪೂಜೆ ಪುನಸ್ಕಾರ ನಡೆಯುತ್ತಿದೆ ಎಂದರು.

Leave a Reply