ಮೋದಿ ನೋಟ್ ಬ್ಯಾನ್ ಹೊಡೆತಕ್ಕೆ ಸಿದ್ದರಾಮಯ್ಯ ಆರ್ಥಿಕ ದಿವಾಳಿ: ಪ್ರತಾಪ್ ಸಿಂಹ

ಬಾಗಲಕೋಟೆ: ಭ್ರಷ್ಟರಾಜಕಾರಣಿಗಳು, ಅಧಿಕಾರಿಗಳು, ರಿಯಲ್ ಎಸ್ಟೇಟ್ ಕುಳಗಳು ಮೋದಿ ಅವರ ನೋಟ್ ಬ್ಯಾನ್ ಹೊಡೆತಕ್ಕೆ ಆರ್ಥಿಕ ದಿವಾಳಿಯಾಗಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಪರಿಸ್ಥಿತಿಯೂ ಹಾಗೆಯೇ ಆಗಿದೆ ಎಂದು ಮೈಸೂರಿನ ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದ್ದಾರೆ.

ಜಮಖಂಡಿ ಬಿಜೆಪಿ ಅಭ್ಯರ್ಥಿ ಶ್ರೀಕಾಂತ್ ಕುಲಕರ್ಣಿ ಪರ ಪ್ರಚಾರಕ್ಕಾಗಿ ಆಗಮಿಸಿದ ಪ್ರತಾಪ್ ಸಿಂಹ, ತಾಲೂಕಿನ ಸಿದ್ದಾಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದರು. ಈ ವೇಳೆ ಸಿದ್ದರಾಮಯ್ಯ ಅವರು ಮಾಡಿಕೊಂಡಿದ್ದ ಬೇನಾಮಿ ಆಸ್ತಿ, ಅಕ್ರಮ ದುಡ್ಡು ಹಾಗೂ ಬೇನಾಮಿ ಕಂಪನಿಗೆ ಸರ್ಕಾರಿ ಭೂಮಿ ಕೊಡಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ನೋಟ್ ಬ್ಯಾನ್ ಮಾಡಿದ್ದರಿಂದ ಸಿದ್ದರಾಮಯ್ಯ ಆರ್ಥಿಕವಾಗಿ ದಿವಾಳಿ ಆಗಿದ್ದಾರೆ ಎಂದು ಆರೋಪಿಸಿದರು.

ಏರ್ ಸೆಲ್ ಪ್ರಕರಣದಲ್ಲಿ ಜಾರಿ ನಿರ್ದೇಶನಲಯ(ಇಡಿ) ಸಲ್ಲಿಸಿದ್ದ ಚಾರ್ಜ್ ಶೀಟ್‍ನಲ್ಲಿ ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಅವರನ್ನು ಎ1 ಆರೋಪಿ ಎಂದು ಉಲ್ಲೇಖಿಸಿದ ವಿಚಾರವಾಗಿ ಪ್ರತಿಕ್ರಿಯಿಸಿದ ಪ್ರತಾಪ್ ಸಿಂಹ ಅವರು, ಸಿದ್ದು ಕ್ರಿಕೆಟ್ ಕಾಮೆಂಟ್ರಿ ತರಹ ಒಂದು ಸೈಕಲ್ ಬಿದ್ದರೆ ಎಲ್ಲಾ ಉದುರಿ ಹೋಗುತ್ತವೆ ಎನ್ನುತ್ತಾರೆ ಅಲ್ವಾ, ಅದರಂತೆ ಕಾಂಗ್ರೆಸ್ಸಿನ ಒಂದೊಂದು ಭ್ರಷ್ಟರ ವಿಕೆಟ್ ಗಳು ಉದುರಿ ಹೋಗುತ್ತವೆ. ಪಿ.ಚಿದಂಬರಂ ಅವರು ಮತ್ತೆ ಲೆಟರ್ ಆಪ್ ಅಂಡರ್ ಸ್ಟ್ಯಾಂಡಿಂಗ್ ಕೊಟ್ಟಿದ್ದರೂ ಹೆಚ್ಚಿನ ಸಾಲ ಕೊಡಿ ಎಂದು ಆರ್‍ಬಿಐ ನವರಿಗೆ ಯಾಕೆ ನಿರ್ದೇಶನಕ ಕೊಟ್ಟರು ಎನ್ನುವುದನ್ನು ಮುಂದೆ ಬಯಲು ಮಾಡುತ್ತೇನೆ ಎಂದರು.

ವೀರಶೈವ-ಲಿಂಗಾಯತ ವಿಚಾರದಲ್ಲಿ ಡಿಕೆಶಿ, ಸಿದ್ದು ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಅವರದ್ದು ಪಶ್ಚಾತ್ತಾಪದ ಹೇಳಿಕೆ ಅಲ್ಲ. ಸೋಲಿನ ಭಯದಿಂದ ನಾಟಕ ಆಡುತ್ತಿದ್ದಾರೆ. ಕಾಂಗ್ರೆಸ್ ಧರ್ಮ ಒಡೆಯುವ ಕೆಲಸಕ್ಕೆ ಜನರು ಪಾಠ ಕಲಿಸಿದ್ದಾರೆ. ಈಗ ಉಪ ಚುನಾವಣೆಯಲ್ಲಿ ಸೋಲಿನ ಭಯದಿಂದ ತಪ್ಪು ಮಾಡಿದ್ದೇವು ಎನ್ನುವ ನಾಟಕ ಮಾಡುತ್ತಾರೆ. ಸಿಎಂ ಮಾಡುತ್ತೇನೆ. ಅಂದರೆ ಯಡಿಯೂರಪ್ಪ ದೇವೇಗೌಡರ ಕಾಲು ಹಿಡಿತಾರೆ ಅಂದಿದ್ದ ದಿನೇಶ್ ಗುಂಡೂರಾವ್ ಹೇಳಿಕೆಗೆ ತಿರುಗೇಟು ನೀಡಿದ ಪ್ರತಾಪ್ ಸಿಂಹ, ಅಪ್ಪನಾಣೆಗೂ ಕುಮಾರಸ್ವಾಮಿ ಸಿಎಂ ಆಗಲ್ಲ ಎಂದು ಹೇಳಿದವರು ಅವರಪ್ಪನ ಬಳಿಯೇ ಹೋಗಿ ಮಗನನ್ನ ಸಿಎಂ ಮಾಡುತ್ತೇನೆ ಎಂದು ಮನೆಗೆ ಹೋದವರು ಯಾರು? ಯಡಿಯೂರಪ್ಪನಾ? ಸಿದ್ದರಾಮಯ್ಯನಾ? ಮೊದಲು ಹೇಳಲಿ ಎಂದು ಪ್ರಶ್ನೆ ಮಾಡಿದರು. ಅಲ್ಲದೇ ದೇವೇಗೌಡರ ಮನೆ ಹೋಗಿ ಕುಳಿತು ಕೊಂಡಿದ್ದು ಇದೇ ಗುಂಡೂರಾವ್ ಹಾಗೂ ಅವರ ಗುರು ಸಿದ್ದರಾಮಯ್ಯ ಅಲ್ವೇ ಎಂದು ಪ್ರಶ್ನಿಸಿ ಟಾಂಗ್ ನೀಡಿದರು.

ಇದೇ ವೇಳೆ ನೀರವ್ ಮೋದಿ ಆಸ್ತಿ ಜಪ್ತಿ ವಿಚಾರಕ್ಕೆ ಪ್ರತಿಕ್ರಿಯಿಸಲು ನಿರಾಕರಿಸಿದ ಪ್ರತಾಪ್ ಸಿಂಹ, ನಿಮ್ಮ ಮಾಧ್ಯಮಕ್ಕೆ ಬಂದು ಈ ಕುರಿತು ಸವಿಸ್ತಾರವಾಗಿ ಮಾತನಾಡುತ್ತೇನೆ ಎಂದು ಉತ್ತರಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *