ಭಗವಾನ್, ಪ್ರಕಾಶ್‍ರೈರನ್ನು ಸೊಮೋಟೊ ಕೇಸ್ ಹಾಕಿ ಒದ್ದು ಒಳಗೆ ಹಾಕ್ಬೇಕು: ಪ್ರಹ್ಲಾದ್ ಜೋಶಿ

ಧಾರವಾಡ: ಪೊಲೀಸರು ಚಿಂತಕ ಭಗವಾನ್ ಹಾಗೂ ನಟ, ಪ್ರಕಾಶ್‍ರೈ ಅವರ ಮೇಲೆ ಸೊಮೋಟೊ ಕೇಸ್ ಹಾಕಿ ಒದ್ದು ಒಳಗೆ ಹಾಕಬೇಕು ಎಂದು ಸಂಸದ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಭಗವಾನ್ ಅನಗತ್ಯವಾಗಿ ರಿಯಾಕ್ಷನ್ ಕೊಡ್ತಾ ಇದ್ದಾರೆ. ಭಗವಾನ್ ಮತ್ತು ಪ್ರಕಾಶ್ ರೈ ಹುಚ್ಚುಚ್ಚರಾಗಿ ಮಾತಾಡ್ತಾ ಇದ್ದಾರೆ. ಅವರಿಗೆ ಯಾವುದೇ ಸಾಮಾಜಿಕ ಕಾಳಜಿ ಇಲ್ಲ. ಅವರಿಗೆ ನಂಬಿಕೆಗಳು ಇಲ್ಲವಾದರೆ ಬಾಯಿ ಮುಚ್ಚಿಕೊಂಡು ಕುಳಿತುಕೊಳ್ಳಬೇಕು. ಮತ್ತೊಬ್ಬರ ವಿಚಾರದ ಕುರಿತು ನಂಬಿಕೆ ಇಲ್ಲದ ಬಗ್ಗೆ ಯಾಕೆ ಮಾತನಾಡುತ್ತಾರೆ. ಅವರಿಬ್ಬರು ಪ್ರಚಾರದ ತೆವಲಿನಿಂದ ಮಾತನಾಡುತ್ತಿದ್ದಾರೆ. ಅವರಿಗೆ ಧೈರ್ಯ ಇದ್ದರೇ ಬೇರೆ ಧರ್ಮವಾದ ಖುರಾನ್ ಮತ್ತು ಬೈಬಲ್ ಬಗ್ಗೆ ಮಾತಾಡಲಿ ಎಂದು ಅವರ ವಿರುದ್ಧ ಆಕ್ರೋಶ ಹೊರಹಾಕಿದರು.

ರಾಹುಲ್ ಗಾಂಧಿ ದೇವಸ್ಥಾನಕ್ಕೆ ಭೇಟಿ ಕುರಿತು ಪ್ರತಿಕ್ರಿಯಿಸಿದ ಪ್ರಹ್ಲಾದ್ ಜೋಶಿ ಅವರಿಗೆ ಬುದ್ಧಿಮಟ್ಟ ಜಾಸ್ತಿಯಾಗಲಿ. ದೇವಸ್ಥಾನಕ್ಕೆ ಹೋಗಲಿ ಅವರಿಗೆ ದೇವರು ಸದ್ಬುದ್ಧಿ ನೀಡಲಿ ಎಂದು ಹಾರೈಸುತ್ತೇನೆ. ಸೋಲು ಆರಂಭಗೊಂಡ ಬಳಿಕ ರಾಹುಲ್ ದೇವಸ್ಥಾನ ಸುತ್ತೋಕೆ ಶುರು ಮಾಡಿದ್ದಾರೆ. ಈ ಮೊದಲು ಯಾವ ದೇವಸ್ಥಾನಕ್ಕೂ ಅವರು ಹೋಗಿಲ್ಲ. ಅವರು ಯಾರು ಅನ್ನೋದೇ ಅವರೇ ಗೊಂದಲದಲ್ಲಿದ್ದರು. ದೇವಸ್ಥಾನಗಳನ್ನು ಸುತ್ತುತ್ತಿರುವ ರಾಹುಲ್ ಅವರು ರಾಮ ಮಂದಿರ ಬಗೆಗಿನ ಕಾಂಗ್ರೆಸ್ ನಿಲುವು ಏನು ಅನ್ನೋದನ್ನು ಬಹಿರಂಗಪಡಿಸಲಿ ಎಂದು ಪ್ರಶ್ನಿಸಿದರು.

ಧಾರವಾಡದಿಂದ ನೀರಾವರಿ ನಿಗಮ ಸ್ಥಳಾಂತರ ವಿಚಾರಕ್ಕೆ ಪ್ರತಿಕ್ರಿಯಿಸಿ, ನಮ್ಮ ಸರ್ಕಾರ ಅವರ ಸರ್ಕಾರ ಅನ್ನೋದು ಇಲ್ಲ. ಕೇಂದ್ರ ಆಗಿರಲಿ, ರಾಜ್ಯ ಆಗಿರಲಿ ಕೆಲವು ನಿಯಮಗಳು ಇರುತ್ತವೆ. ಕುಮಾರಸ್ವಾಮಿ ಹಾಗೂ ರೇವಣ್ಣ ಕಂಪೆನಿ ನೈರುತ್ಯ ರೇಲ್ವೆ ಬರುವಾಗ ಕೂಡಾ ಅಡ್ಡಗಾಲು ಹಾಕಿದ್ದರು. ಈಗಲೂ ಅದನ್ನೇ ಮುಂದುವರೆಸಿದ್ದಾರೆ, ನೀರಾವರಿ ನಿಗಮ ಹೊಸಪೇಟೆಗೆ ಸ್ಥಳಾಂತರ ಮಾಡಿ ಧಾರವಾಡ-ಬಳ್ಳಾರಿಗೆ ಜಗಳ ಹಚ್ಚುವ ಕೆಲಸ ಮಾಡಲಾಗುತ್ತಿದೆ. ಅಷ್ಟೇ ಅಲ್ಲದೇ ಬರಪರಿಹಾರಕ್ಕಾಗಿ 2 ವರ್ಷದಿಂದ ಕೊಟ್ಟಂತಹ ಹಣ ಅನೇಕ ರೈತರಿಗೆ ತಲುಪಿಲ್ಲ ಎಂದು ಹೇಳಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *