ಬೆಳ್ಳಿಪರದೆ ಮೇಲೆ ಬರಲಿದೆ ‘ಕೊರೊನಾ’

ಬೆಂಗಳೂರು: ವಿಶ್ವದೆಲ್ಲೆಡೆ ಭೀತಿ ಹುಟ್ಟಿಸಿರುವ ಕೊರೊನಾ ವೈರಸ್‍ಗೆ ಈಗಾಗಲೇ ಸಾವಿರಾರು ಮಂದಿ ಬಲಿಯಾಗಿದ್ದಾರೆ. ಈ ನಡುವೆ ಎಲ್ಲೆಡೆ ಆತಂಕ ಸೃಷ್ಟಿಸಿರುವ ಕೊರೊನಾ ಕುರಿತಾಗಿ ಕನ್ನಡದಲ್ಲಿ ಸಿನಿಮಾ ಮಾಡಲು ಚಿತ್ರತಂಡವೊಂದು ಸಜ್ಜಾಗಿದೆ.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಈಗಾಗಲೇ ‘ಕೊರೊನಾ’ ಹೆಸರನ್ನು ನೊಂದಾಯಿಸಲು ಅರ್ಜಿ ಸಲ್ಲಿಸಲಾಗಿದೆ. ಫಿಲ್ಮ್ ಛೇಂಬರ್‍ನ ಉಪಾಧ್ಯಕ್ಷ, ನಿರ್ಮಾಪಕ ಉಮೇಶ್ ಬಣಕಾರ್ ಅವರು ತಾವು ಮಾಡಲು ಹೊರಟಿರುವ ಸಿನಿಮಾಗೆ ‘ಕೊರೊನಾ’ ಟೈಟಲ್ ನೊಂದಣಿಗೆ ಅರ್ಜಿ ಸಲ್ಲಿಸಿದ್ದು, ಈ ಹೆಸರು ರಿಜಿಸ್ಟರ್ ಆಗುವುದು ಬಹತೇಕ ಖಚಿತ ಎನ್ನಲಾಗುತ್ತಿದೆ.

ಉಮೇಶ್ ಬಣಕಾರ್ ಅವರು ಈ ಚಿತ್ರವನ್ನು ಕನ್ನಡ ಮತ್ತು ಹಿಂದಿ ಭಾಷೆಯಲ್ಲಿ ನಿರ್ಮಾಣ ಮಾಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಕನ್ನಡದಲ್ಲಿ ‘ಕೊರೊನಾ’ ಹಾಗೂ ಹಿಂದಿಯಲ್ಲಿ ‘ಡೆಡ್ಲಿ ಕೊರೊನಾ’ ಹೆಸರಿನಲ್ಲಿ ಸಿನಿಮಾ ನಿರ್ಮಾಣವಾಗಲಿದೆ. ಈಗಾಗಲೇ ಚಿತ್ರಕಥೆ ಬಗ್ಗೆ ಸಿನಿಮಾ ತಂಡ ಕೆಲಸ ಆರಂಭಿಸಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಕನ್ನಡದಲ್ಲಿ ‘ಬಿಸಿರಕ್ತ’ ಸಿನಿಮಾ ನಿರ್ದೇಶಿಸಿದ್ದ ಶಿವಕುಮಾರ್ ಅವರು ‘ಕೊರೊನಾ’ ಸಿನಿಮಾಗೆ ಆಕ್ಷನ್ ಕಟ್ ಹೇಳಲಿದ್ದಾರೆ. ಸದ್ಯ ಅನಾರೋಗ್ಯದಿಂದ ಬಳಲುತ್ತಿರುವ ನಿರ್ದೇಶಕರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರು ಚೇತರಿಸಿಕೊಂಡ ಬಳಿಕ ಸಿನಿಮಾ ಬಗ್ಗೆ ಹೆಚ್ಚಿನ ಮಾಹಿತಿ ಹೊರಬೀಳಲಿದೆ.

ಸದ್ಯ ಚಿತ್ರದ ಹೆಸರು ನೊದಣಿಗೆ ಚಿತ್ರತಂಡ ಅರ್ಜಿ ಸಲ್ಲಿಸಿದ್ದು, ಇನ್ನೂ ಚಿತ್ರದ ನಾಯಕ-ನಾಯಕಿ ಉಳಿದ ತಾರಾಗಣದಲ್ಲಿ ಯಾರ್ಯಾರು ಇರಲಿದ್ದಾರೆ ಎನ್ನುವ ಬಗ್ಗೆ ಅಂತಿಮವಾಗಿಲ್ಲ. ಹೀಗಾಗಿ ಚಿತ್ರಕಥೆ ಹಾಗೂ ತಾರಾಗಣ ಫೈನಲ್ ಆದ ಬಳಿಕ ಸಿನಿಮಾ ಸೆಟ್ಟೇರಲಿದೆ.

ಈ ಹಿಂದೆ ಕೇರಳದಲ್ಲಿ ಆತಂಕ ಸೃಷ್ಟಿಸಿದ ನಿಫಾ ವೈರಸ್ ಬಗ್ಗೆ ಮಲೆಯಾಳಂ ನಲ್ಲಿ ‘ವೈರಸ್’ ಎಂದು ಸಿನಿಮಾ ತೆರೆಕಂಡಿತ್ತು. ‘ವೈರಸ್’ ಸಿನಿಮಾ ಅಭಿಮಾನಿಗಳ ಮನ ಗೆದ್ದಿದ್ದಲ್ಲದೇ ಹಲವು ಪ್ರಶಸ್ತಿಗಳನ್ನು ಕೂಡ ತನ್ನದಾಗಿಸಿಕೊಂಡಿತ್ತು. ವೈರಸ್ ಚಿತ್ರದಲ್ಲಿ ಮುಖ್ಯಪಾತ್ರದಲ್ಲಿ ಪಾರ್ವತಿ ತಿರುವೊತ್ತು, ಟೋವಿನೋ ಥಾಮಸ್, ರೇವತಿ, ಆಸಿಫ್ ಅಲಿ ಇತರರು ಕಾಣಿಸಿಕೊಂಡಿದ್ದರು. 2019ರ ಜೂನ್ 7ರಂದು ಈ ಚಿತ್ರ ಬಿಡುಗಡೆಗೊಂಡಿತ್ತು. ಚಿತ್ರಕ್ಕೆ ಆಶಿಕ್ ಅಬು ಆಕ್ಷನ್ ಕಟ್ ಹೇಳಿದ್ದರು.

Comments

Leave a Reply

Your email address will not be published. Required fields are marked *