ಮಾಲೀಕನ ಪತ್ನಿ ಆತ್ಮಹತ್ಯೆಯಿಂದ ಪ್ರೇರಣೆ – ಮಗಳನ್ನು ಹತ್ಯೆಗೈದು ಗ್ರಾ.ಪಂ ಅಧ್ಯಕ್ಷೆ ಸೂಸೈಡ್

– ಮಹಿಳೆ ಬರೆದಿಟ್ಟಿದ್ದ ರೀತಿಯಲ್ಲಿಯೇ ಡೆತ್‌ನೋಟ್ ಬರೆದ ಶೃತಿ

ಬೆಂಗಳೂರು: ನಗರದ ಬಾಗಲಗುಂಟೆಯಲ್ಲಿ (Bagalgunte) ಮಗಳನ್ನು ಕೊಂದು ತಾಯಿ ಶೃತಿ ಆತ್ಮಹತ್ಯೆಗೆ ಶರಣಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಡಿಗೆ ಮನೆಯ ಮಾಲೀಕನ ಪತ್ನಿ ಆತ್ಮಹತ್ಯೆಯಿಂದ ಪ್ರೇರಣೆ ಪಡೆದು ಸೂಸೈಡ್ ಮಾಡಿಕೊಂಡಿರುವುದಾಗಿ ವಿಚಾರದ ಬೆಳಕಿಗೆ ಬಂದಿದೆ.

ಪೊಲೀಸರ ತನಿಖೆ ವೇಳೆ ವಿಚಾರ ಬೆಳಕಿಗೆ ಬಂದಿದ್ದು, ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಶೃತಿ ಮತ್ತು ಗೋಪಾಲಕೃಷ್ಣ ದಂಪತಿ ಬೆಂಗಳೂರಿನಲ್ಲಿ ನೆಲೆಸಿದ್ದರು. ಈ ಹಿಂದೆ ಬಾಗಲಗುಂಟೆಯಲ್ಲಿ ಬೇರೊಂದು ಮನೆಯಲ್ಲಿ ಬಾಡಿಗೆಗಿದ್ದರು. ಆ ಸಮಯದಲ್ಲಿ ಅಕ್ರಮ ಸಂಬಂಧ ವಿಚಾರವಾಗಿ ಮನೆ ಮಾಲೀಕ ಹಾಗೂ ಪತ್ನಿ ನಡುವೆ ಜಗಳ ನಡೆಯುತ್ತಿತ್ತು. ಹೀಗಾಗಿ ಮಾಲೀಕನ ಪತ್ನಿ ಡೆತ್‌ನೋಟ್ ಬರೆದು, ಅದರಲ್ಲಿ ಪತಿ ಹಾಗೂ ಮಹಿಳೆ ಹೆಸರು ಉಲ್ಲೇಖಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಅದನ್ನು ತಲೆಯಲ್ಲಿಟ್ಟುಕೊಂಡು, ಮಹಿಳೆಯ ಆತ್ಮಹತ್ಯೆಯಿಂದ ಪ್ರೇರಣೆಯಾಗಿ ಶೃತಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಶಂಕೆ ವ್ಯಕ್ತವಾಗಿದೆ. ಜೊತೆಗೆ ಮಹಿಳೆಯ ಬರೆದಿದ್ದ ರೀತಿಯಲ್ಲಿಯೇ ಶೃತಿ ಡೆತ್‌ನೋಟ್ ಬರೆದಿರುವುದಾಗಿ ತಿಳಿದು ಬಂದಿದೆ.ಇದನ್ನೂ ಓದಿ:

ಘಟನೆ ಏನು?
ಭಾನುವಾರ ಬಾಗಲಗುಂಟೆ ನಿವಾಸಿ ಶೃತಿ (33) ಆತ್ಮಹತ್ಯೆ ಮಾಡಿಕೊಂಡಿದ್ದರು. ಪಾವಗಡದ ಗುಂಡಾರನಹಳ್ಳಿ ಗ್ರಾಮಪಂಚಾಯತಿ ಅಧ್ಯಕ್ಷೆಯಾಗಿದ್ದ ಶೃತಿ ಗಂಡನ ಅಕ್ರಮ ಸಂಬಂಧಕ್ಕೆ ಬೇಸತ್ತು, ಮಗಳು ರೋಶಿಣಿಯನ್ನು (5) ಫ್ಯಾನ್‌ಗೆ ನೇಣು ಹಾಕಿ ಬಳಿಕ ಅದೇ ಫ್ಯಾನಿಗೆ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.

ಶೃತಿ, ಈ ಹಿಂದೆ ಪಂಚಾಯತ್ ಕಚೇರಿಯಲ್ಲಿ ಆಡಿಟಿಂಗ್ ಕೆಲಸ ಮಾಡುತ್ತಿದ್ದ ಗೋಪಾಲಕೃಷ್ಣನನ್ನ ಪ್ರೀತಿಸಿ ಹತ್ತು ವರ್ಷಗಳ ಹಿಂದೆ ಮದುವೆಯಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದರು. ಭಾನುವಾರ ಸಂಜೆ ಪತಿ ಮನೆಯಿಂದ ಹೊರಗಡೆ ಹೋಗಿದ್ದ ಸಂದರ್ಭ ಶೃತಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಮಗ ಮನೆಯ ಹೊರಗಡೆ ಆಟವಾಡುತ್ತಿದ್ದ. ಮಗ ಮನೆಯೊಳಗೆ ಬಂದಾಗ ಘಟನೆ ಬೆಳಕಿಗೆ ಬಂದಿತ್ತು.

ಗಂಡ ಗೋಪಾಲಕೃಷ್ಣನ ಅಕ್ರಮ ಸಂಬಂಧಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಶೃತಿ ಡೆತ್ ನೋಟ್ ಬರೆದಿದ್ದರು. ಸ್ಥಳಕ್ಕೆ ಬಾಗಲಗುಂಟೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದರು. ಮರಣೋತ್ತರ ಪರೀಕ್ಷೆ ಮುಗಿಸಿ ಕುಟುಂಬಸ್ಥರಿಗೆ ಮೃತದೇಹಗಳನ್ನು ಪೊಲೀಸರು ಒಪ್ಪಿಸಿದ್ದು, ಸದ್ಯ ಪತಿಯನ್ನು ವಶಕ್ಕೆ ಪಡೆದ ಪೊಲೀಸರು ತನಿಖೆ ನಡೆಸುತ್ತಿದ್ದರು.ಇದನ್ನೂ ಓದಿ: