ತಾಯಿ ಆತ್ಮಹತ್ಯೆಗೆ ಶರಣಾಗಿದ್ದನ್ನು ನೋಡಿ ಮಗನೂ ನೇಣಿಗೆ ಶರಣು

ಮಡಿಕೇರಿ: ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದನ್ನು ನೋಡಿ ಮಗ ಕೂಡ ನೇಣಿಗೆ ಶರಣಾಗಿರುವ ಘಟನೆ ಭಾನುವಾರ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಚೌಡ್ಲು ಗ್ರಾಮದ ಆಲೇಕಟ್ಟೆಯಲ್ಲಿ ನಡೆದಿದೆ.

ತಂಗಮಣಿ (55) ಮತ್ತು ಹರೀಶ್ (26) ಆತ್ಮಹತ್ಯೆ ಶರಣಾದ ತಾಯಿ-ಮಗ. ಆಲೇಕಟ್ಟೆ ರಸ್ತೆ ನಿವಾಸಿಯಾಗಿರುವ ತಂಗಮಣಿ ಕೂಲಿ ಕೆಲಸ ಮಾಡಿಕೊಂಡಿದ್ದರು. ಆದರೆ ಭಾನುವಾರ ತಂಗಮಣಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಆಟೋ ಚಾಲಕರಾಗಿರುವ ಹರೀಶ್ ಮನೆಗೆ ಬಂದ ಸಂದರ್ಭದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ.

ತಾಯಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ನೋಡಿದ ಹರೀಶ್ ತಕ್ಷಣ ತನ್ನ ಸಂಬಂಧಿಕರಿಗೆ ವಿಷಯ ತಿಳಿಸಿದ್ದಾರೆ. ವಿಷಯ ತಿಳಿದು ಮನೆಗೆ ಆಗಮಿಸಿದ ಸಂಬಂಧಿಕರು ಈ ಬಗ್ಗೆ ಪೊಲೀಸ್ ಠಾಣೆಗೆ ಮಾಹಿತಿ ನೀಡಲು ಹೋಗಿದ್ದಾರೆ. ಈ ಸಂದರ್ಭದಲ್ಲಿ ಹರೀಶ್ ಮನೆಯೊಳಗೆ ತೆರಳಿ ಪಂಚೆಯಿಂದ ನೇಣು ಬಿಗಿದುಕೊಂಡಿದ್ದಾರೆ.

ಏನಿದು ಘಟನೆ?
ಕಳೆದ 9 ತಿಂಗಳ ಹಿಂದೆ ಆಲೇಕಟ್ಟೆ ರಸ್ತೆಯ ಸಿದ್ದೇಶ್ವರ ಟಯರ್ ವರ್ಕ್ ಸಮೀಪದ ಯುವತಿಯನ್ನು ವಿವಾಹವಾಗಿದ್ದ ಹರೀಶ್‍ನ ದಾಂಪತ್ಯ ಜೀವನ ಸರಿಯಾಗಿರಲಿಲ್ಲ. ಆತನ ಪತ್ನಿ ಕೇವಲ 15 ದಿನಗಳ ಕಾಲ ಮಾತ್ರ ಮನೆಯಲ್ಲಿದ್ದು, ನಂತರ ತವರು ಮನೆ ಸೇರಿಕೊಂಡಿದ್ದಳು. ಹರೀಶ್ ಆಗಾಗ ತನ್ನ ಪತ್ನಿಯನ್ನು ಕರೆ ತರಲು ಯತ್ನಿಸಿದರೂ ಫಲಕಾರಿಯಾಗಲಿಲ್ಲ. ಈ ಮಧ್ಯೆ ಪತ್ನಿ ವಿವಾಹ ವಿಚ್ಛೇದನ ಸಹಿತ ಜೀವನಾಂಶಕ್ಕಾಗಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದು, ಇದರಿಂದಾಗಿ ತಾಯಿ-ಮಗ ಜೀವನದಲ್ಲಿ ಜಿಗುಪ್ಸೆ ಹೊಂದಿದ್ದರು.

ಈ ಬಗ್ಗೆ ಇಬ್ಬರು ತನ್ನ ಸಂಬಂಧಿಕರ ಬಳಿ ಹಾಗೂ ಸ್ಥಳೀಯರೊಂದಿಗೆ ಆಗಾಗ ಬೇಸರ ವ್ಯಕ್ತಪಡಿಸುತ್ತಿದ್ದರು. ಭಾನುವಾರ ಮಧ್ಯಾಹ್ನ 2.30ರ ಸುಮಾರಿಗೆ ತಂಗಮಣಿ ಅವರು ತಮ್ಮ ಮನೆಯಲ್ಲಿ ಪಂಚೆಯಿಂದ ನೇಣು ಬಿಗಿದುಕೊಂಡಿದ್ದು, ಇದನ್ನು ಗಮನಿಸಿದ ಮಗ ಹರೀಶ್ ನೇಣಿಗೆ ಶರಣಾಗಿದ್ದಾರೆ. ಸ್ಥಳಕ್ಕೆ ಸೋಮವಾರಪೇಟೆ ಪೊಲೀಸ್ ವೃತ್ತ ನಿರೀಕ್ಷಕ ನಂಜುಂಡೇಗೌಡ, ಠಾಣಾಧಿಕಾರಿ ಶಿವಶಂಕರ್ ಸೇರಿದಂತೆ ಸಿಬ್ಬಂದಿ ತೆರಳಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments

Leave a Reply

Your email address will not be published. Required fields are marked *