ಚೆನ್ನೈ: ತಾಯಿಯೊಬ್ಬಳು ಅನೈತಿಕ ಸಂಬಂಧಕ್ಕಾಗಿ ತನ್ನ ಒಂದೂವರೆ ವರ್ಷದ ಮಗುವನ್ನು ಕೊಲೆ ಮಾಡಿದ ಘಟನೆ ತಮಿಳು ನಾಡಿನ ನೆಲೈನಲ್ಲಿ ನಡೆದಿದೆ.
ವದಕಾಶಿ (35) ಮಗುವನ್ನು ಕೊಲೆ ಮಾಡಿದ ತಾಯಿ. ವದಕಾಶಿ ತಿರುವೆಂಕಟಂನ ಪಾಲಂಗಿಟಿಯ ನಿವಾಸಿಯಾಗಿರುವ ರಾಜ್ ಎಂಬವರನ್ನು ಮದುವೆಯಾಗಿದ್ದಳು. ವದಕಾಶಿಗೆ ಬೇರೆ ವ್ಯಕ್ತಿ ಜೊತೆ ಅನೈತಿಕ ಸಂಬಂಧ ಇತ್ತು. ಹೀಗಾಗಿ ಆಕೆ ತನ್ನ ಒಂದೂವರೆ ವರ್ಷದ ಮಗ ತನೀಶ್ ಪ್ರಭಾಕರನ್‍ನನ್ನು ಕೊಲೆ ಮಾಡಿದ್ದಾಳೆ.
ತನ್ನ ಮನೆಗೆ ಹಾಲು ವಿತರಿಸುತ್ತಿದ್ದ ಸ್ವಾಮಿನಾಥನ್ ಜೊತೆ ವದಕಾಶಿಗೆ ಅನೈತಿಕ ಸಂಬಂಧ ಇತ್ತು. ಈ ವಿಷಯ ವದಕಾಶಿ ಪತಿ ರಾಜ್‍ಗೆ ತಿಳಿಯಿತು. ಆಗ ವದಕಾಶಿ ಮಗ ತನೀಶ್‍ನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಳು. ಇದರಿಂದ ಭಯಗೊಂಡ ರಾಜ್ ತನ್ನ ಮಗನನ್ನು ಚಿಕ್ಕಪ್ಪನ ಮನೆಗೆ ಕಳುಹಿಸಿದ್ದನು.

ಸೋಮವಾರ ವದಕಾಶಿ ತನ್ನ ಮಗನನ್ನು ನೋಡಲು ಕೋವಿಲ್ಪಟ್ಟಿಗೆ ಹೋಗಿದ್ದಳು. ಬಳಿಕ ತನ್ನ ಮಗನನ್ನು ಸ್ವಾಮಿನಾಥನ್ ಮನೆಗೆ ಕರೆದುಕೊಂಡು ಹೋಗಿ ಅಲ್ಲಿಯೇ ವಾಸಿಸುತ್ತಿದ್ದಳು. ಈ ವೇಳೆ ತನೀಶ್ ಹೊಟ್ಟೆ ಹಸಿವು ತಾಳಲಾರದೇ ಅಳಲು ಶುರು ಮಾಡಿದ್ದನು. ಆಗ ವದಕಾಶಿ ಹಾಗೂ ಸ್ವಾಮಿನಾಥನ್ ಆತನನ್ನು ಹಿಗ್ಗಾಮುಗ್ಗಾ ಹೊಡೆದಿದ್ದಾರೆ.
ತನೀಶ್ ತೀವ್ರವಾಗಿ ಹಲ್ಲೆಗೆ ಒಳಗಾದಾಗ ವದಕಾಶಿ ಹಾಗೂ ಸೋಮನಾಥನ್ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಅಷ್ಟರಲ್ಲೇ ತನೀಶ್ ಮೃತಪಟ್ಟಿದ್ದನು. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿದ್ದಾರೆ. ಈ ವೇಳೆ ವದಕಾಶಿ ಹಾಗೂ ಸ್ವಾಮಿನಾಥನ್ ಇಬ್ಬರು ಸೇರಿ ಮಗುವನ್ನು ಕೊಲೆ ಮಾಡಿದ್ದಾರೆ ಎಂಬ ವಿಷಯ ಬಹಿರಂಗವಾಯಿತು.

Leave a Reply