ಹಣ ನೀಡದ್ದಕ್ಕೆ ಪೂಜೆ ಮಾಡುತ್ತಿದ್ದ ತಾಯಿಯನ್ನು ರಾಡ್‍ನಿಂದ ಹೊಡೆದು ಕೊಲೆಗೈದ ಮಗ

ನವದೆಹಲಿ: ಹಣ ನೀಡದ್ದಕ್ಕೆ 22 ವರ್ಷದ ಯುವಕನೊಬ್ಬ ತನ್ನ ತಾಯಿಗೆ ಕಬ್ಬಿಣದ ರಾಡ್‍ನಿಂದ ಹೊಡೆದು ಕೊಲೆ ಮಾಡಿದ್ದಾನೆ.

ಈಶಾನ್ಯ ದೆಹಲಿಯ ಜ್ಯೋತಿ ನಗರದಲ್ಲಿ ಘಟನೆ ನಡೆದಿದ್ದು, ಶಿಕ್ಷಾ ದೇವಿ ಎಂಬುವರನ್ನು ಮಗ ಅಶುತೋಷ್ ರಾಡ್‍ನಿಂದ ಹೊಡೆದಿದ್ದಾನೆ. ಘಟನೆ ನಡೆಯುತ್ತಿದ್ದಂತೆ ಇನ್ನೊಬ್ಬ ಮಗ ಮುಕುಲ್ ತಾಯಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾನೆ. ಗುರು ತೇಜ್ ಬಹದ್ದೂರ್(ಜಿಟಿಬಿ) ಆಸ್ಪತ್ರೆಯಿಂದ ಘಟನೆ ಕುರಿತು ಮಾಹಿತಿ ಲಭ್ಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ನಂತರ ಆರೋಪಿ ಅಶುತೋಷ್ ಕಾಣೆಯಾಗಿದ್ದ. ಗಂಭೀರವಾಗಿ ಗಾಯಗೊಂಡಿದ್ದ ಶಿಕ್ಷಾ ದೇವಿ ಸೋಮವಾರ ಮೃತಪಟ್ಟಿದ್ದಾರೆ. ಕೊಲೆ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ವೇದ ಪ್ರಕಾಶ್ ಸೂರ್ಯ ಮಾಹಿತಿ ನೀಡಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಆರೋಪಿ ಅಶುತೋಷ್‍ನನ್ನು ಉತ್ತರ ಪ್ರದೇಶದ ಮೋದಿ ನಗರದಿಂದ ಸೋಮವಾರವೇ ಬಂಧಿಸಲಾಗಿದೆ. ಅಶುತೋಷ್ ಶಿಕ್ಷಾ ದೇವಿಯನ್ನು ಕಬ್ಬಿಣದ ರಾಡ್‍ನಿಂದ ಹಲವು ಬಾರಿ ತಲೆಗೆ ಹೊಡೆದಿದ್ದಾನೆ ಎಂದು ಸೂರ್ಯ ತಿಳಿಸಿದರು. ಪೂಜೆ ಮಾಡುತ್ತಿದ್ದ ಸಂದರ್ಭದಲ್ಲಿ ತಾಯಿ ತಲೆಗೆ ಹೊಡೆದಿರುವುದಾಗಿ ಆರೋಪಿ ಪೊಲೀಸರಿಗೆ ತಿಳಿಸಿದ್ದಾನೆ.

ಸುಮಾರು ಏಳರಿಂದ ಎಂಟು ಬಾರಿ ತನ್ನ ತಾಯಿ ಬಳಿ ಹಣಕ್ಕಾಗಿ ಪೀಡಿಸಿದ್ದಾನೆ. ಆದರೆ ತಾಯಿ ಇದಕ್ಕೆ ಉತ್ತರಿಸಿಲ್ಲ. ಇದರಿಂದ ಕೋಪಗೊಂಡ ಅಶುತೋಷ್ ಕಬ್ಬಿಣದ ರಾಡ್ ತೆಗೆದುಕೊಂಡು ಅವರ ತಲೆಗೆ ಹಲವು ಬಾರಿ ಹೊಡೆದಿದ್ದಾನೆ. ನಂತರ ಸ್ಥಳದಿಂದ ಕಾಲ್ಕಿತ್ತಿದ್ದಾನೆ ಎಂದು ಸೂರ್ಯ ವಿವರಿಸಿದರು.

ಘಟನೆ ನಂತರ ಆರೋಪಿಯು ಉತ್ತರ ಪ್ರದೇಶದ ಬೆಹ್ತಾ ರೈಲು ನಿಲ್ದಾಣ ಸೇರಿದಂತೆ ಶರಣಪುರ, ಶಾಮ್ಲಿ, ಹರಿದ್ವಾರ, ಲೋನಿ ಹಲವು ಸ್ಥಳಗಳಲ್ಲಿ ತಂಗಿದ್ದನು. ಆರೋಪಿಯನ್ನು ಬಂಧಿಸಿ, ಕಬ್ಬಿಣದ ರಾಡ್‍ನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *