ಅಕ್ರಮ ಸಂಬಂಧ ಕಣ್ಣಾರೆ ಕಂಡ ಮಗನನ್ನೇ ಕೊಂದಳು ಪಾಪಿ ತಾಯಿ!

ಚಿಕ್ಕಬಳ್ಳಾಪುರ: ಪ್ರಿಯಕರನ ಜೊತೆ ಚಕ್ಕಂದವಾಡುತ್ತಿದ್ದ ದೃಶ್ಯವನ್ನ ಕಣ್ಣಾರೆ ಕಂಡ ಮಗನನ್ನ ಪ್ರಿಯಕರನ ಜೊತೆ ಸೇರಿ ಹೆತ್ತ ತಾಯಿಯೇ ಕೊಲೆ ಮಾಡಿರುವ ಅಮಾನವೀಯ ಘಟನೆ ಜಿಲ್ಲೆಯ ಚಿಂತಾಮಣಿ ನಗರದಲ್ಲಿ ಬೆಳಕಿಗೆ ಬಂದಿದೆ.

ಸುದೀಪ್(7) ಹೆತ್ತ ತಾಯಿಯ ಕೈಯಲ್ಲೇ ಹತ್ಯನಾಗಿರುವ ಬಾಲಕ. ಭವಾನಿ ಪ್ರಿಯಕರನ ಜೊತೆ ಸೇರಿ ಹೆತ್ತ ಮಗನನ್ನೇ ಕೊಲೆ ಮಾಡಿದ ಪಾಪಿ ತಾಯಿ. ಜೂನ್ 30 ರಂದು ಚಿಂತಾಮಣಿ ನಗರದ ಸೊಣ್ಣಶೆಟ್ಟಿಹಳ್ಳಿ ಬಡಾವಣೆಯ ಖಾಸಗಿ ಬಸ್ ಕಂಡಕ್ಟರ್ ಪ್ರಕಾಶ್ ಹಾಗೂ ಭವಾನಿಯ ದಂಪತಿಯ 7 ವರ್ಷದ ಮಗ ಸುದೀಪ್ ಅನುಮಾನಸ್ಪದವಾಗಿ ಸಾವನ್ನಪ್ಪಿದ್ದ.

ಬಾಲಕನ ಕುತ್ತಿಗೆ ಭಾಗದಲ್ಲಿ ರಕ್ತ ಹೆಪ್ಪುಗಟ್ಟಿದ ಕಲೆಗಳಿದ್ದ ಕಾರಣ ವೈದ್ಯರು ಅನುಮಾನ ವ್ಯಕ್ತಪಡಿಸಿ ಪೊಲೀಸರಿಗೆ ಮಾಹಿತಿ ನೀಡಿದ್ರು. ಈ ಸಂಬಂಧ ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆಗಿಳಿದ ಪೊಲೀಸರು ಕೊನೆಗೆ ಹೆತ್ತ ತಾಯಿಯೇ ಕೊಲೆಗಾರ್ತಿ ಅನ್ನೋದನ್ನ ಬಯಲು ಮಾಡಿದ್ದಾರೆ.

ಜೂನ್ 30 ರಂದು ತಾಯಿ ಭವಾನಿ ತನ್ನ ಪ್ರಿಯಕರ ಗಾರೆ ಮೇಸ್ತ್ರಿ ಮುರುಗಮಲ್ಲದ ಮೂರ್ತಿ ಎಂಬಾತನ ಜೊತೆ ಚಕ್ಕಂದ ಆಡುತ್ತಿದ್ದಾಗ ಮಗ ಸುದೀಪ್ ಕಣ್ಣಾರೆ ಕಂಡಿದ್ದಾನೆ. ಈ ವೇಳೆ ಚುರುಕಾಗಿದ್ದ ಬಾಲಕ ಈ ವಿಷಯವನ್ನ ತಂದೆಗೆ ತಿಳಿಸುವುದಾಗಿ ಹೇಳಿದ್ದಾನೆ.

ಈ ಹಿಂದೆಯೂ ಎರಡು ಮೂರು ಬಾರಿ ಬಾಲಕ ಇದನ್ನ ಕಂಡಿದ್ದನಂತೆ. ಹೀಗಾಗಿ ವಿಷಯ ಗಂಡನಿಗೆ ಗೊತ್ತಾದ್ರೆ ಕಷ್ಟ ಆಗುತ್ತೆ ಅಂತ ಅರಿತ ಭವಾನಿ ಪ್ರಿಯಕರನ ಜೊತೆ ಸೇರಿ ಮಗನ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದಳು. ನಂತರ ಏನೂ ಆರಿಯದ ಹಾಗೆ ಮಗನಿಗೆ ಹುಷಾರಿಲ್ಲ ಅಂತ ಚಿಂತಾಮಣಿ ತಾಲೂಕು ಆಸ್ಪತ್ರೆಗೆ ಕರೆ ತಂದಿದ್ದಳು.

ಕೆಲಸಕ್ಕೆ ಹೋಗಿದ್ದ ಗಂಡನಿಗೆ ಕರೆ ಮಾಡಿ ಮಗನಿಗೆ ಹುಷಾರಿಲ್ಲ ಆಸ್ಪತ್ರೆಗೆ ಬನ್ನಿ ಅಂತ ಹೇಳಿ ಕೂಡ ನಾಟಕ ಮಾಡಿದ್ದಳು. ಆದ್ರೆ ಪೊಲೀಸರು ಮೊಬೈಲ್ ಫೋನ್ ಕರೆಗಳ ಆಧಾರದ ಮೇಲೆ ಅನುಮಾನ ವ್ಯಕ್ತಪಡಿಸಿ, ಭವಾನಿ ಹಾಗೂ ಪ್ರಿಯಕರ ಮೂರ್ತಿಯನ್ನ ತೀವ್ರ ವಿಚಾರಣೆಗೆ ಒಳಪಡಿಸಿದಾಗ ಸತ್ಯ ಬಾಯ್ಬಿಟ್ಟಿದ್ದಾರೆ.

Comments

Leave a Reply

Your email address will not be published. Required fields are marked *