ಸಕಲೇಶಪುರ ಬಳಿ ಕೆಸರಲ್ಲಿ ಸಿಲುಕಿದ ತಾಯಾನೆ- ಅಮ್ಮನನ್ನು ಬಿಟ್ಟು ಕದಲದ ಮರಿಯಾನೆ

ಹಾಸನ: ನೀರು ಕುಡಿಯಲು ಹೋಗಿ ತಾಯಾನೆಯ ಕಾಲು ಕೆಸರಿನಲ್ಲಿ ಸಿಲುಕಿ ನರಳಾಡುತ್ತಿರುವ ಮನಕಲಕುವ ಘಟನೆ ಸಕಲೇಶಪುರ ತಾಲೂಕಿನ ಕಡದರಹಳ್ಳಿ ಗ್ರಾಮದಲ್ಲಿ ನಡೆದಿದೆ.

ಕಾಡಾನೆಯ ಕಾಲು ಕೆಸರಿನಲ್ಲಿ ಹೂತುಕೊಂಡು ನರಕಯಾತನೆ ಅನುಭವಿಸುತ್ತಿದ್ರೆ, ಇತ್ತ ತನ್ನ ತಾಯಿ ವೇದನೆ ಕಂಡು ಮರಿಯಾನೆ ಮರುಗುತ್ತಿರುವ ದೃಶ್ಯ ಎಂತವರನ್ನು ಒಂದು ಬಾರಿ ಕಣ್ಣೀರು ಹಾಕಿಸುವಂತಿದೆ.

ಕಳೆದ ನಾಲ್ಕು ದಿನಗಳಿಂದ ತಾಯಿ ಆನೆ ಕೆಸರಿನಲ್ಲೇ ಸಿಲುಕಿಕೊಂಡಿದೆ. ಮರಿ ಆನೆ ತನ್ನ ತಾಯಿ ಆನೆಯನ್ನು ಬಿಟ್ಟು ಕದಲಿಲ್ಲ. ಸದ್ಯ ಆನೆಯನ್ನು ಹೊರ ತೆಗೆಯಲು ಸ್ಥಳೀಯರು ಹರಸಾಹಸ ಪಡುತ್ತಿದ್ದಾರೆ. ಆನೆಯ ಒಂದು ಕಾಲು ಗಾಯಗೊಂಡ ಪರಿಣಾಮ ಕೆಸರಿನಲ್ಲಿ ಸಿಲುಕಿಕೊಂಡಿರುವ ಶಂಕೆ ವ್ಯಕ್ತವಾಗುತ್ತಿದೆ. ಬೆಂಗಳೂರಿನ ಅರವಳಿಕೆ ತಜ್ಞರಿಗೆ ಈ ಕುರಿತು ಮಾಹಿತಿ ರವಾನಿಸಿದ್ದು, ಸ್ಥಳಕ್ಕೆ ದೌಡಾಯಿಸಿ ಸಾಕಾನೆಗಳು ಮುಖಾಂತರ ಕೆಸರಿನಿಂದ ಆನೆಯನ್ನು ಸುರಕ್ಷಿತವಾಗಿ ಹೊರತೆಗೆಯಬೇಕಾಗಿದೆ.

ಇತ್ತ ಸ್ಥಳೀಯರು ಆನೆಯನ್ನು ಕೆಸರಿನಿಂದ ರಕ್ಷಿಸಲು ಹರಸಾಹಸ ಪಡುತ್ತಿದ್ದಾರೆ. ಜೆಸಿಬಿ ಮುಖಾಂತರ ಹೂಳು ತೆಗಿಸುತ್ತಿದ್ದಾರೆ. ಒಟ್ಟಿನಲ್ಲಿ ಕಾರ್ಯಚರಣೆ ಮುಂದುವರಿದಿದೆ.

ಮಲೆನಾಡು ಭಾಗದಲ್ಲಿ ಹೆಚ್ಚಿದ ಕಾಡಾನೆಗಳ ಉಪಟಳ ಹೆಚ್ಚಾಗಿದೆ. ಕಾಡಾನೆಗಳು ಅಹಾರ ಅರಸಿ ಕಾಡಿನಿಂದ ನಾಡಿಗೆ ಬರುತ್ತಿವೆ. ಹೀಗಾಗಿ ಕಾಡಾನೆ ಮತ್ತು ಮಾನವರ ನಡುವಿನ ಸಂಘರ್ಷ ಮುಂದುವರಿದಿದೆ. ಆದ್ರೂ ಅರಣ್ಯ ಇಲಾಖೆ ಕಾಡಾನೆ ಹಾವಳಿ ನಿಯಂತ್ರಿಸಲು ಸಂಪೂರ್ಣ ವಿಫಲವಾಗಿದೆ ಅಂತ ಸ್ಥಳೀಯರು ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *