ಮಗುವಿನೊಂದಿಗೆ ನೀರಿಗೆ ಧುಮುಕಿದ ತಾಯಿ – ಕೊನೆ ಕ್ಷಣದಲ್ಲಿ ಮಗು ರಕ್ಷಣೆ

ಚಿಕ್ಕಬಳ್ಳಾಪುರ: ಆ ತಾಯಿಗೆ ಅದೇನಾಗಿತ್ತೋ ಏನೋ, ತನ್ನ 7 ತಿಂಗಳ ಮುದ್ದು ಮಗುವಿನೊಂದಿಗೆ ಕುಂಟೆಗೆ ಹಾರಿದ್ದಾಳೆ. ಆದರೆ ಮಗುವಿನ ಅದೃಷ್ಟವೋ ಏನೋ, ದೇವರಂತೆ ಕೊನೆಯ ಗಳಿಗೆಯಲ್ಲಿ ಬಂದ ಆ ವ್ಯಕ್ತಿ ನೀರಿಗೆ ಇಳಿದು, ಮಗುವನ್ನು ಮೇಲೆತ್ತಿದ್ದಾನೆ. ಪವಾಡ ಎಂಬಂತೆ ಮಗು ಬದುಕುಳಿದಿದೆ. ಆದರೆ ತಾಯಿ ಮಾತ್ರ ಬಾರದ ಲೋಕಕ್ಕೆ ಹೋಗಿದ್ದಾಳೆ.

ತಾಯಿಯನ್ನು ಕಳೆದುಕೊಂಡು ಮಗು ತಬ್ಬಲಿಯಾಗಿರುವ ಮನಕಲುಕುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ತಾಲೂಕಿನ ಗುಂತಪನಹಳ್ಳಿ ಗ್ರಾಮದ ಬಳಿಯ ನೂಕಲಬಂಡೆಯಲ್ಲಿ ಒಂದು ಪವಾಡವೇ ನಡೆದು ಹೋಗಿದೆ. ಅದ್ಯಾಕೋ ಏನೋ ಗುಂತಪನಹಳ್ಳಿ ನಿವಾಸಿ ಪ್ರಮೀಳಾ ತನ್ನ 7 ತಿಂಗಳ ಮುದ್ದು ಮಗುವಿನೊಂದಿಗೆ ಕಲ್ಲು ಕ್ವಾರಿಯ ನೂಕಲಬಂಡೆಯ ದೊಡ್ಡದಾದ ಕುಂಟೆಗೆ ಧುಮುಕಿದ್ದಾಳೆ. ಆದರೆ ಅಲ್ಲೇ ಕುಂಟೆಯ ಪಕ್ಕದಲ್ಲಿ ಕೆಲಸ ಮಾಡುತ್ತಿದ್ದ ರೈತ ದಂಪತಿ ರಕ್ಷಣೆಗೆ ಜನರಲ್ಲಿ ಮೊರೆಯಿಟ್ಟಿದ್ದಾರೆ.

ರೈತ ದಂಪತಿ ದಾರಿಯಲ್ಲಿ ಹೋಗುತ್ತಿದ್ದವರನ್ನು ಸಹಾಯಕ್ಕಾಗಿ ಬೇಡಿಕೊಂಡಿದ್ದಾರೆ. ಆದರೆ ಅರ‍್ಯಾರೂ ಸಹಾಯಕ್ಕೆ ಮುಂದೆ ಬಂದಿಲ್ಲ. ಅಷ್ಟರಲ್ಲೇ ಗ್ರಾಮದಿಂದ ಜಮೀನು ಕಡೆಗೆ ಅದೇ ರಸ್ತೆಯಲ್ಲಿ ಬಂದ ರೈತ ದಂಪತಿಯ ಮಗ ಗಂಗಾಧರ್, ತಂದೆಯ ಮಾತು ಕೇಳಿ ಕೂಡಲೇ ಕುಂಟೆಗೆ ಇಳಿದು ರಕ್ಷಣೆಗೆ ಮುಂದಾಗಿದ್ದಾನೆ. ಇದನ್ನೂ ಓದಿ: ಗಂಗಾನದಿಗೆ ಸೇತುವೆಯಿಂದ ಜಿಗಿದ 75ರ ವೃದ್ಧೆ – ಸಾಹಸ ಕಂಡು ಬೆರಗಾದ ಜನ

ನೀರಿನಲ್ಲಿ ಮುಳುಗಿ ಹೋಗಿದ್ದ ಮಗು ಗಂಗಾಧರ್ ಕೈಗೆ ಸಿಕ್ಕಿದೆ. ಅಷ್ಟೊತ್ತಿಗಾಗಲೇ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಮಗುವನ್ನು ಮೇಲೆ ತಂದು, ಕುಡಿದಿದ್ದ ನೀರನ್ನು ಹೊರಹಾಕುವಂತೆ ಮಾಡಿ, ಗಾಳಿ ಊದಿ ಆರೈಕೆ ಮಾಡಿದ್ದು, ಪವಾಡದ ರೀತಿಯಲ್ಲಿ ಮಗು ಬದುಕಿದೆ. ಪ್ರಮೀಳಾ ರಕ್ಷಣೆಗೆ ಮುಂದಾದರೂ ಆಕೆಯ ಪತ್ತೆಯಾಗಲಿಲ್ಲ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಗಂಟೆಗಟ್ಟಲೆ ಹುಡುಕಾಟ ನಡೆಸಿ, ಪ್ರಮೀಳಾ ಮೃತದೇಹ ಹೊರತೆಗೆದಿದ್ದಾರೆ. ಇದನ್ನೂ ಓದಿ: ಉದಯಪುರ ಟೈಲರ್‌ ಹತ್ಯೆ ಖಂಡಿಸಿ ರಾಜ್ಯದಲ್ಲಿ ಶುರುವಾಯ್ತು ನನ್ನ ಕತ್ತು ಸೀಳಬೇಡಿ ಅಭಿಯಾನ

ಪ್ರಮೀಳಾ ಗುಂತಪನಹಳ್ಳಿ ನಿವಾಸಿಯಾಗಿದ್ದು, ಗಂಡ ಮುನಿರಾಜು ಮದ್ಯವ್ಯಸನಿಯಾಗಿದ್ದ. ಮುನಿರಾಜುವಿನ ತಂದೆ-ತಾಯಿ ಮುನಿರಾಜುನನ್ನು ದೇವನಹಳ್ಳಿ ಬಳಿಯ ಮದ್ಯವ್ಯಸನ ನಿರ್ಮೂಲನಾ ಕೇಂದ್ರಕ್ಕೆ ಸೇರಿಸಿದ್ದರು ಎಂದು ತಿಳಿದುಬಂದಿದೆ. ಹೀಗೆ ಕೌಟುಂಬಿಕ ಕಲಹದ ಹಿನ್ನೆಲೆ ಪ್ರಮೀಳಾ ಆತ್ಮಹತ್ಯೆಗೆ ಯತ್ನಿಸಿರುವ ಅನುಮಾನ ಮೂಡಿದೆ.

ಇತ್ತ ಮದ್ಯವ್ಯಸನ ನಿರ್ಮೂಲನಾ ಕೇಂದ್ರದಲ್ಲಿರುವ ಗಂಡನನ್ನು ಕರೆದುಕೊಂಡು ಬರಲು ಪೋಷಕರು ಹೋಗಿದ್ದಾರೆ. ಪೊಲೀಸರು ಪ್ರಮಿಳಾ ಮೃತದೇಹವನ್ನು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಿದ್ದು, ಮಗುವನ್ನು ಸ್ಥಳೀಯ ಮಹಿಳೆಯರು ಆರೈಕೆ ಮಾಡುತ್ತಿದ್ದಾರೆ.

Live Tv

Comments

Leave a Reply

Your email address will not be published. Required fields are marked *