ಜ್ಯೋತಿಷಿ ಮಾತು ಕೇಳಿ ಮಕ್ಕಳನ್ನ ಕೊಂದು ಆತ್ಮಹತ್ಯೆ ಮಾಡ್ಕೊಂಡ ತಾಯಿಯ ಡೆತ್ ನೋಟ್ ವೈರಲ್.!

ಚಿಕ್ಕಬಳ್ಳಾಪುರ: ಜ್ಯೋತಿಷಿ ಮಾತು ಕೇಳಿ ತನ್ನಿಬ್ಬರು ಮಕ್ಕಳನ್ನ ಕೊಂದು ಆತ್ಮಹತ್ಯೆ ಮಾಡಿಕೊಂಡಿದ್ದ ತಾಯಿ ಬರೆದಿರುವ ಡೆತ್ ನೋಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಚಿಕ್ಕಬಳ್ಳಾಪುರ ನಗರದ ಮುನಿಸಿಪಾಲ್ ಕಾಲೇಜು ಹಿಂಭಾಗದ ಬಡಾವಣೆಯಲ್ಲಿ ಜನವರಿ 27 ರಂದು ತಾಯಿ ಉಷಾ ತನ್ನ ಮಗನಾದ ಶಮಂತ್ ಹಾಗೂ ಮಗಳಾದ ಶಾನವಿಗೆ ನಿದ್ರೆ ಮಾತ್ರೆ ಹಾಕಿ ಕೊಲೆ ಮಾಡಿದ್ದು, ಬಳಿಕ ತಾನು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಇದನ್ನೂ ಓದಿ: ಮುಗ್ಧ ಮಕ್ಕಳಿಬ್ಬರನ್ನು ಕೊಂದು ತಾಯಿ ನೇಣಿಗೆ ಶರಣು!

ಡೆತ್‍ನೋಟ್ ನಲ್ಲಿ ಏನಿದೆ?
ನನ್ನ ಮತ್ತು ಮಕ್ಕಳ ಸಾವಿಗೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ನಾನೇ ಕಾರಣ, ಇದಕ್ಕೆ ಬೇರೆ ಯಾರು ಜವಬ್ದಾರರಲ್ಲ. ನನ್ನ ಮಕ್ಕಳ ಮುಂದಿನ ಭವಿಷ್ಯ ಚೆನ್ನಾಗಿಲ್ಲ ಎಂದು ಒಬ್ಬ ಜ್ಯೋತಿಷಿ ಹೇಳಿದಾಗಿನಿಂದ ನನಗೆ ಬದುಕಿನ ಮೇಲೆ ಆಶಕ್ತಿಯೇ ಕಡಿಮೆ ಆಗಿದೆ. ನಾನು ಜೀವನದಲ್ಲಿ ಹೆಚ್ಚು ಸಂತೋಷವನ್ನು ಕಂಡಿಲ್ಲ. ನನಗೆ ಮಕ್ಕಳೇ ಜೀವನ ಎಂದುಕೊಂಡಿದ್ದೆ. ಆದರೆ ಅವರ ಜೀವನವೇ ಚೆನ್ನಾಗಿಲ್ಲ ಎಂದಾದ ಮೇಲೆ ನನಗೆ ಬದುಕಬೇಕು ಅನ್ನಿಸುತ್ತಿಲ್ಲ. ನನ್ನಿಂದ ಯಾರಿಗೂ ಸಂತೋಷವಿಲ್ಲ, ಒಳ್ಳೆಯ ಹೆಂಡತಿ ಆಗಿಲ್ಲ, ಒಳ್ಳೆಯ ತಾಯಿಯೂ ಆಗಲಿಲ್ಲ. ದೇವರನ್ನು ತುಂಬಾ ನಂಬಿದ್ದೆ. ಆದರೆ ಆತ ನನಗೆ ತುಂಬಾ ಮೋಸ ಮಾಡಿಬಿಟ್ಟ.

ಅಶೋಕ್ ನನ್ನನ್ನು ಕ್ಷಮಿಸಿ, ನನಗೆ ಒಳ್ಳೆಯ ಕುಟುಂಬ ಸಿಕ್ಕಿತ್ತು. ಆದರೆ ಜ್ಯೋತಿಷಿ ಹೇಳಿದ ಮಾತಿನಿಂದ ನನಗೆ ಧೈರ್ಯ ಸಾಲುತ್ತಿಲ್ಲ. ಅವರು ಹೇಳಿದ್ದ ಅನೇಕ ಮಾತುಗಳು ನಿಜವಾಗಿದೆ. ಆದ್ದರಿಂದ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ಮಕ್ಕಳನ್ನು ಬಿಟ್ಟು ಹೋಗಲು ಇಷ್ಟವಾಗುತ್ತಿಲ್ಲ. ಆದ್ದರಿಂದ ಅವರನ್ನು ಸಾಯಿಸಲು ನಿರ್ಧರಿಸಿಬಿಟ್ಟೆ. ನನ್ನಂತ ಪಾಪಿ ತಾಯಿ ಯಾರು ಇಲ್ಲ ಎಂದು ಪತಿ, ಕುಟುಂಬ ಮತ್ತು ತಮ್ಮ ಜೀವನದ ಬಗ್ಗೆ ಬರೆದಿದ್ದಾರೆ.

ಈ ಕುರಿತು ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

Comments

Leave a Reply

Your email address will not be published. Required fields are marked *