ಮಣ್ಣಿನ ಮನೆ ಧ್ವಂಸಗೊಳಿಸಿ ತಾಯಿ-ಮಗಳನ್ನು ಬಲಿ ಪಡೆದ ಕಾಡಾನೆ ಹಿಂಡು

ರಾಂಚಿ: ಇಂದು ಬೆಳಗ್ಗೆ ಕಾಡಾನೆ ಹಿಂಡೊಂದು ಮಣ್ಣಿನ ಮನೆಯನ್ನು ಧ್ವಂಸಗೊಳಿಸಿದ ಪರಿಣಾಮ ಮನೆಯೊಳಗಿದ್ದ ಓರ್ವ ಮಹಿಳೆ ಮತ್ತು ಆಕೆಯ ಒಂದು ವರ್ಷದ ಮಗಳು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಾರ್ಖಂಡ್‍ನ ಹಜಾರಿಬಾಗ್ ಜಿಲ್ಲೆಯ ಉಪ್ಪದ ಗ್ರಾಮದಲ್ಲಿ ನಡೆದಿದೆ.

ಉಪ್ಪದ ಗ್ರಾಮದ ನಿವಾಸಿ ರಾಜು ಅವರ ಮನೆ ಮೇಲೆ ಆನೆಗಳು ದಾಳೆ ಮಾಡಿದ್ದು, ಪತ್ನಿ ಪಾನೋ(30) ಮತ್ತು ಒಂದು ವರ್ಷದ ಮಗಳನ್ನು ಬಲಿಪಡೆದಿದೆ. ಮಂಗಳವಾರ ರಾತ್ರಿ ವೇಳೆ ಉಪ್ಪದ ಗ್ರಾಮಕ್ಕೆ ಪ್ರವೇಶಿಸಿದ ಆನೆಗಳ ಹಿಂಡು ಭಾರಿ ದಾಳಿ ಮಾಡಿ ಆಸ್ತಿಪಾಸ್ತಿಯನ್ನು ಹಾನಿ ಮಾಡಿತ್ತು.

ಮುಂಜಾನೆ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಮಲಗಿದ್ದ ರಾಜು ಅವರ ಮಣ್ಣಿನ ಮನೆಯ ಮೇಲೆ ಆನೆಗಳು ದಾಳಿ ನಡೆಸಿದೆ. “ಆನೆಗಳು ನಮ್ಮ ಮನೆ ಮೇಲೆ ದಾಳಿ ನಡೆಸಿದಾಗ ಮಕ್ಕಳನ್ನು ಕರೆದುಕೊಂಡು ಹೊರಗೆ ಓಡಿ ತಪ್ಪಿಸಿಕೊಳ್ಳಿ ಎಂದು ಪತ್ನಿ ಹೇಳಿದಳು. ನಾನು ಒಂದು ಮಗುವಿನೊಂದಿಗೆ ತಪ್ಪಿಸಿಕೊಂಡೆ. ಆದರೆ ಪತ್ನಿ ಮತ್ತು ಒಂದು ವರ್ಷದ ಮಗಳು ಹೊರಬರಲಾಗದೆ ಸಾವನ್ನಪ್ಪಿದರು ಎಂದು ಪತಿ ಕಣ್ಣೀರಿಟ್ಟಿದ್ದಾರೆ.

ಸದ್ಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ. ಆನೆಗಳು ಗ್ರಾಮಕ್ಕೆ ನುಗ್ಗಿರುವ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಗ್ರಾಮಸ್ಥರು ಮಾಹಿತಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಅಧಿಕಾರಿಗಳು ಗ್ರಾಮಕ್ಕೆ ಬಂದು ಜನರಿಗೆ ಯಾವುದೇ ಸಹಾಯ ಮಾಡಲಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಜಾರ್ಖಂಡ್ ನಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಇಲ್ಲಿಯವರೆಗೆ ಆನೆಗಳ ದಾಳಿಗೆ 700ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

Comments

Leave a Reply

Your email address will not be published. Required fields are marked *