ಟೆಸ್ಟ್‌ ಕ್ರಿಕೆಟ್‌ನಲ್ಲಿ 500 ವಿಕೆಟ್‌ – ಇತಿಹಾಸ ಬರೆದ ಸ್ಪಿನ್‌ ಮಾಂತ್ರಿಕ ಅಶ್ವಿನ್‌

ರಾಜ್‌ಕೋಟ್‌: ಇಲ್ಲಿನ ಸೌರಾಷ್ಟ್ರ ಕ್ರಿಕೆಟ್‌ ಅಸೋಸಿಯೇಷನ್‌ ಸ್ಟೇಡಿಯಂನಲ್ಲಿ ಇಂಗ್ಲೆಂಡ್‌ ವಿರುದ್ಧ ನಡೆಯುತ್ತಿರುವ 3ನೇ ಟೆಸ್ಟ್‌ ಪಂದ್ಯದಲ್ಲಿ ಟೀಂ ಇಂಡಿಯಾದ (Team India) ಸ್ಪಿನ್‌ ಮಾಂತ್ರಿಕ ಆರ್‌.ಅಶ್ವಿನ್‌ (Ashwin) ಟೆಸ್ಟ್‌ ಕ್ರಿಕೆಟ್‌ನಲ್ಲಿ ಹೊಸ ಇತಿಹಾಸ ಬರೆದಿದ್ದಾರೆ.

ಇಂಗ್ಲೆಂಡ್‌ (England) ವಿರುದ್ಧ ನಡೆಯುತ್ತಿರುವ 3ನೇ ಟೆಸ್ಟ್‌ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್‌ ತಂಡದ ಝಾಕ್ ಕ್ರಾವ್ಲಿ (Zak Crawley) ಅವರನ್ನು ಔಟ್‌ ಮಾಡುವ ಮೂಲಕ ಟೆಸ್ಟ್‌ ಕ್ರಿಕೆಟ್‌ನಲ್ಲಿ 500 ವಿಕೆಟ್‌ ಪಡೆದ ಸಾಧನೆ ಮಾಡಿದ್ದಾರೆ. ಜೊತೆಗೆ ಟೆಸ್ಟ್‌ ಕ್ರಿಕೆಟ್‌ನಲ್ಲಿ (Test Cricket) 500 ವಿಕೆಟ್‌ ಪಡೆದ 2ನೇ ಭಾರತೀಯ ಎಂಬ ಖ್ಯಾತಿಗೂ ಪಾತ್ರರಾಗಿದ್ದಾರೆ. ಇದನ್ನೂ ಓದಿ: 3rd Test: ರೋಹಿತ್‌, ಜಡೇಜಾ ಶತಕ; ಸರ್ಫರಾಜ್‌ ಫಿಫ್ಟಿ – ಭಾರತ ಮೊದಲ ದಿನದಾಟದ ಅಂತ್ಯಕ್ಕೆ 326/5

ದಿಗ್ಗಜರ ಎಲೈಟ್‌ ಲಿಸ್ಟ್‌ ಸೇರಿದ ಸ್ಪಿನ್‌ ಮಾಂತ್ರಿಕ:
ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತಿಹೆಚ್ಚು ವಿಕೆಟ್‌ ಪಡೆದ ವಿಶ್ವದ ಆಟಗಾರರ ಪೈಕಿ ಶ್ರೀಲಂಕಾದ ಮುತ್ತಯ್ಯ ಮುರಳಿಧರನ್‌ 800 ವಿಕೆಟ್‌ ಪಡೆದು ಅಗ್ರಸ್ಥಾನದಲ್ಲಿದ್ದಾರೆ. ಶೇನ್‌ ವಾರ್ನೆ (708 ವಿಕೆಟ್‌), ಜೇಮ್ಸ್‌ ಆಂಡರ್ಸನ್‌ (696 ವಿಕೆಟ್‌), ಅನಿಲ್‌ ಕುಂಬ್ಳೆ (619 ವಿಕೆಟ್‌), ಸ್ಟುವರ್ಡ್‌ ಬ್ರಾಡ್‌ (604 ವಿಕೆಟ್‌), ಗ್ಲೆನ್‌ ಮೆಕ್‌ಗ್ರಾತ್‌ (563 ವಿಕೆಟ್‌), ಕರ್ಟ್ನಿ ವಾಲ್ಷ್ (519 ವಿಕೆಟ್‌), ನಥಾನ್‌ ಲಿಯೊನ್‌ (517 ವಿಕೆಟ್‌) ಪಡೆದು ಕ್ರಮವಾಗಿ ಮೊದಲ 8 ಸ್ಥಾನಗಳಲ್ಲಿದ್ದರೆ, 500 ವಿಕೆಟ್‌ ಪೂರೈಸಿದ ಅಶ್ವಿನ್‌ 9ನೇ ಸ್ಥಾನದಲ್ಲಿದ್ದಾರೆ. ಇನ್ನೂ ಡೇಲ್‌ಸ್ಟೇನ್‌ 439 ವಿಕೆಟ್‌ ಪಡೆದು 10ನೇ ಸ್ಥಾನದಲ್ಲಿದ್ದಾರೆ.

ಮೊದಲ ಇನ್ನಿಂಗ್ಸ್‌ನಲ್ಲೇ ಭಾರತ ಬೃಹತ್‌ ಮೊತ್ತ:
ಇಂಗ್ಲೆಂಡ್‌ ವಿರುದ್ಧ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 445 ರನ್‌ ಬಾರಿಸಿದೆ. ಬಹತ್‌ ಮೊತ್ತದ ಚೇಸಿಂಗ್‌ ಆರಂಭಿಸಿರುವ ಇಂಗ್ಲೆಂಡ್‌ 21 ಓವರ್‌ಗಳಲ್ಲಿ 1 ವಿಕೆಟ್‌ ನಷ್ಟಕ್ಕೆ 117 ರನ್‌ ಗಳಿಸಿದೆ. ಇದನ್ನೂ ಓದಿ: ರೋಹಿತ್‌ ಬೊಂಬಾಟ್‌ ಶತಕ – ಮಹಿ ಸಿಕ್ಸರ್‌ ದಾಖಲೆ ಮುರಿದ ಹಿಟ್‌ಮ್ಯಾನ್‌

ಕುಸಿದ ಭಾರತಕ್ಕೆ ರೋಹಿತ್‌ – ಜಡ್ಡು ಶತಕಗಳ ಬಲ:
ಮೊದಲು ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾ, 33 ರನ್‌ಗಳಿಗೆ 3 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೀಡಾಗಿತ್ತು. ಇದರಿಂದ ಭಾರತ ಮೊದಲ ದಿನವೇ ಆಲ್‌ ಔಟ್‌ ಆಗಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದ್ರೆ ಕುಸಿದ ಭಾರತಕ್ಕೆ ನಾಯಕ ರೋಹಿತ್‌ ಶರ್ಮಾ, ರವೀಂದ್ರ ಜಡೇಜಾ ಆಸರೆಯಾದರು. 4ನೇ ರೋಹಿತ್‌ ಶರ್ಮಾ ಹಾಗೂ ರವೀಂದ್ರ ಜಡೇಜಾ ಜೋಡಿ 329 ಎಸೆತಗಳಲ್ಲಿ 204 ರನ್‌ಗಳ ಜೊತೆಯಾಟ ನೀಡಿತು. ರೋಹಿತ್‌ ಶರ್ಮಾ 131 ರನ್‌ (196 ಎಸೆತ, 14 ಬೌಂಡರಿ, 3 ಸಿಕ್ಸರ್)‌ ಗಳಿಸಿದ್ರೆ, ರವೀಂದ್ರ ಜಡೇಜಾ 225 ಎಸೆತಗಳಲ್ಲಿ 112 ರನ್‌ (9 ಬೌಂಡರಿ, 2 ಸಿಕ್ಸರ್‌) ಬಾರಿಸಿ ಮಿಂಚಿದರು. ಇದನ್ನೂ ಓದಿ: 8 ತಿಂಗಳಲ್ಲಿ ಆಸ್ಟ್ರೇಲಿಯಾ ವಿರುದ್ಧವೇ 3 ವಿಶ್ವಕಪ್‌ ಟ್ರೋಫಿ ಕಳೆದುಕೊಂಡ ಭಾರತ!

ಇದರೊಂದಿಗೆ ಸರ್ಫರಾಜ್‌ ಖಾನ್‌ 62 ರನ್‌ (66 ಎಸೆತ, 9 ಬೌಂಡರಿ, 1 ಸಿಕ್ಸರ್‌), ಧ್ರುವ್‌ ಜುರೆಲ್‌ 46 ರನ್‌, ಅಶ್ವಿನ್‌ 37 ರನ್‌ ಹಾಗೂ ಜಸ್ಪ್ರೀತ್‌ ಬುಮ್ರಾ 26 ರನ್‌ಗಳ ಕೊಡುಗೆ ನೀಡಿದರು. ಇದರಿಂದ ಟೀಂ ಇಂಡಿಯಾ 400 ರನ್‌ಗಳ ಗಡಿ ದಾಟುವಲ್ಲಿ ಯಶಸ್ವಿಯಾಯಿತು.