ಲಷ್ಕರ್ ಉಗ್ರ ಅಬು ದುಜಾನಾ ನನ್ನು ಹೊಡೆದುರುಳಿಸಿದ ಭದ್ರತಾ ಪಡೆ

ಶ್ರೀನಗರ: ಜಮ್ಮು ಕಾಶ್ಮೀರದ ಪುಲ್ವಾಮಾ ಬಳಿಯ ಹಕ್ರೀಪುರದಲ್ಲಿ ಇಂದು ಬೆಳಿಗ್ಗೆ ನಡೆದ ಎನ್‍ಕೌಂಟರ್‍ನಲ್ಲಿ ಲಷ್ಕರ್ ಸಂಘಟನೆಯ ಉಗ್ರ ಅಬು ದುಜಾನಾ ಹಾಗೂ ಆತನ ಸಹಚರನನ್ನು ಭದ್ರತಾ ಪಡೆ ಹೊಡೆದುರುಳಿಸಿದೆ.

ಆರಿಫ್ ಲಲಿಹಾರಿ ಹಾಗೂ ಮತ್ತಿಬ್ಬರು ಉಗ್ರರ ಜೊತೆ ದುಜಾನಾ ಮನೆಯೊಂದರಲ್ಲಿ ಅಡಗಿ ಕುಳಿತಿದ್ದ. ಇಂದು ಮುಂಜಾನೆ 3 ಗಂಟೆ ವೇಳೆಗೆ ಭದ್ರತಾ ಪಡೆ ಮನೆಯನ್ನ ಸುತ್ತುವರಿದಿತ್ತು. ಗ್ರಾಮದಲ್ಲಿ ಉಗ್ರರು ಅಡಗಿರುವ ಬಗ್ಗೆ ಸೇನೆಗೆ ಗುಪ್ತಚರ ಮಾಹಿತಿ ಸಿಕ್ಕಿತ್ತು. ಸೇನೆ ಕಾರ್ಯಾಚರಣೆ ನಡೆಸಲು ಬಂದ ವೇಳೆ ಉಗ್ರರು ಗುಂಡಿನ ದಾಳಿ ಆರಂಭಿಸಿದ್ರು. ನಂತರ ಭದ್ರತಾ ಪಡೆ ಪ್ರತಿ ದಾಳಿ ನಡೆಸಿ ಉಗ್ರರನ್ನು ಹತ್ಯೆ ಮಾಡಿದೆ.

ಪಾಕಿಸ್ತಾನದಲ್ಲಿ ಜನಿಸಿದ ದುಜಾನಾ ಕಾಶ್ಮೀರ ಕಣಿವೆಯಲ್ಲಿ ಲಷ್ಕರ್ ಕಮಾಂಡರ್ ಆಗಿದ್ದ. ಆದ್ರೆ ಕೆಲವು ತಿಂಗಳ ಹಿಂದೆ ಸಂಘಟನೆಯಲ್ಲಿ ಜಗಳವಾಗಿ ಆತನನ್ನು ಕೆಳಗಿಳಿಸಲಾಗಿತ್ತು.

ಭದ್ರತಾ ಪಡೆ ಹಾಗೂ ಸಾರ್ವಜನಿಕರ ಮೇಲಿನ ದಾಳಿಗೆ ಸಂಬಂಧಿಸಿದಂತೆ ಸುಮಾರು 30ಕ್ಕೂ ಹೆಚ್ಚು ಪ್ರಕರಣಗಳಲ್ಲಿ ದುಜಾನಾ ಬೇಕಾಗಿದ್ದ. ಆತನ ತಲೆಗೆ 15 ಲಕ್ಷ ರೂ. ಬಹುಮಾನ ಕೂಡ ಘೋಷಿಸಲಾಗಿತ್ತು.

ಸದ್ಯಕ್ಕೆ ಕಾರ್ಯಾಚರಣೆ ಮುಗಿದಿದ್ದು, ಉಗ್ರರ ಮೃತದೇಹಗಳನ್ನ ವಶಪಡಿಸಿಕೊಳ್ಳಲಾಗಿದೆ ಎಂದು ಕಾಶ್ಮೀರದ ಪೊಲೀಸರು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *