ಚಿಕ್ಕೋಡಿಯಲ್ಲಿ ಗ್ರಾಮ ತೊರೆದ 50ಕ್ಕೂ ಹೆಚ್ಚು ಕುಟುಂಬಗಳು – ಘಟಪ್ರಭಾ ನದಿ ರಸ್ತೆ ಸೇತುವೆ ಜಲಾವೃತ

ಬಾಗಲಕೋಟೆ/ಚಿಕ್ಕೋಡಿ: ಮಹಾರಾಷ್ಟ್ರ ರಾಜ್ಯದ ಘಟ್ಟ ಪ್ರದೇಶಗಳಲ್ಲಿ ಮಳೆ ಮುಂದುವರಿದ ಪರಿಣಾಮ ಕೃಷ್ಣಾ ನದಿ ನೀರಿನ ಹರಿವಿನ ಪ್ರಮಾಣದಲ್ಲಿ ಮತ್ತೇ ಹೆಚ್ಚಳವಾಗಿದೆ.

ಇಂದು ಮತ್ತೇ ಒಂದೂವರೆ ಅಡಿಯಷ್ಟು ಕೃಷ್ಣಾ ನದಿ ನೀರಿನ ಹೆಚ್ಚಳವಾಗಿದ್ದು, ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದ 50 ಕ್ಕೂ ಹೆಚ್ಚು ಕುಟುಂಬಗಳಿರುವ ಗಡ್ಡೆಯನ್ನ ಕೃಷ್ಣಾ ನದಿ ಸುತ್ತು ವರೆದಿದೆ. ಹೆಚ್ಚಿನ ಪ್ರಮಾಣದಲ್ಲಿ ಬರುತ್ತಿರುವ ನೀರಿನ್ನ ನೋಡಿ ಆತಂಕಗೊಂಡ ಜನರು ತಮ್ಮ ಜಾನುವಾರು ಹಾಗೂ ಕೃಷಿ ಉಪಕರಣಗಳೊಂದಿಗೆ ಗಡ್ಡೆ ಪ್ರದೇಶದಿಂದ ಇಂಗಳಿ ಗ್ರಾಮದ ಸುರಕ್ಷಿತ ಸ್ಥಳಕ್ಕೆ ಬರುತ್ತಿದ್ದಾರೆ.

ಜಿಲ್ಲಾಡಳಿತದ ನೆರವಿನ ನೀರಿಕ್ಷೆಯಲ್ಲಿ ಈ ಜನರಿದ್ದಾರೆ. ಕೃಷ್ಣಾ ನದಿಗೆ 1 ಲಕ್ಷ 86 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಹಿಪ್ಪರಗಿ ಜಲಾಶಯದ 22 ಗೇಟ್ ಗಳ ಮೂಲಕ 1 ಲಕ್ಷ 85 ಸಾವಿರ ಕ್ಯೂಸೆಕ್ ನೀರನ್ನ ಹೊರ ಬಿಡಲಾಗುತ್ತಿದೆ.

ಬಾಗಲಕೋಟೆಯಲ್ಲಿ ನಿರಂತರ ಮಳೆ ಸುರಿದ ಪರಿಣಾಮ ಘಟಪ್ರಭಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಅಕ್ಕಿಮರಡಿ ಹಾಗೂ ಮಿರ್ಜಿ ಗ್ರಾಮದ ಮಧ್ಯದ ಸೇತುವೆ ಸಂಪೂರ್ಣ ಜಲಾವೃತಗೊಂಡಿದೆ. ಜಿಲ್ಲೆಯ ಮುಧೋಳ ತಾಲೂಕಿನಲ್ಲಿ ಬರುವ ಅಕ್ಕಿಮರಡಿ ಹಾಗೂ ಮಿರ್ಜಿ ಗ್ರಾಮಗಳ ನಡುವಿನ ಸೇತುವೆ ಇದಾಗಿದ್ದು, ಸೇತುವೆ ಮೇಲೆ ಸುಮಾರು ಮೂರು ಅಡಿಗಳಷ್ಟು ಎತ್ತರದಲ್ಲಿ ನೀರು ಹರಿಯುತ್ತಿದೆ. ಹೀಗಾಗಿ ಒಂಟಗೋಡಿ, ಮಿರ್ಜಿ, ಅಕ್ಕಿಮರಡಿ, ಚನಾಳ ಹಾಗೂ ಮಹಲಿಂಗಪುರ ಗ್ರಾಮಗಳ ರಸ್ತೆ ಸಂಪರ್ಕ ಕಡಿತಗೊಂಡಿದೆ.

Comments

Leave a Reply

Your email address will not be published. Required fields are marked *