ಬೆಂಗ್ಳೂರಿನಲ್ಲಿವೆ 3 ಲಕ್ಷಕ್ಕೂ ಅಧಿಕ ಬೀದಿ ನಾಯಿಗಳು – ಯಾವ ವಲಯದಲ್ಲಿ ಎಷ್ಟು ನಾಯಿಗಳಿವೆ?

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಬೀದಿ ನಾಯಿಗಳ ದಾಳಿಗೆ ತುತ್ತಾದವರ ಸಂಖ್ಯೆಗೇನು ಕಡಿಮೆಯಿಲ್ಲ. ಈ ಸಂಖ್ಯೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಬಿಬಿಎಂಪಿ ಹಲವು ಯೋಜನೆಗಳನ್ನ ಹಾಕಿಕೊಂಡು, ಬೀದಿ ನಾಯಿಗಳ ಹಾವಳಿ ಹಾಗೂ ಅವುಗಳ ನಿಯಂತ್ರಣಕ್ಕೆ ಸಮೀಕ್ಷೆಯನ್ನು ಆರಂಭಿಸಿತ್ತು. ಇದೀಗಾ ಸಮೀಕ್ಷೆಯಲ್ಲಿ ನಗರದಲ್ಲಿ ಬರೋಬ್ಬರಿ 3.09 ಲಕ್ಷ ಬೀದಿ ನಾಯಿಗಳಿವೆ ಎಂಬುದು ವರದಿಯಾಗಿದೆ.

ಬೆಂಗಳೂರಿನ 8 ವಲಯಗಳಲ್ಲಿ 3,09,972 ಬೀದಿ ನಾಯಿಗಳಿವೆ. ‘ವರ್ಲ್ಡ್ ವೈಡ್ ವೆಟರ್ನರಿ ಸರ್ವಿಸ್ ಸೆಂಟರ್’ ಸಹಯೋಗದಲ್ಲಿ ಬಿಬಿಎಂಪಿ ಆ್ಯಪ್ ಆಧರಿಸಿ 198 ವಾರ್ಡ್ ಗಳಲ್ಲಿ ಸಮೀಕ್ಷೆ ನಡೆಸಲಾಗಿತ್ತು. ಈ ವೇಳೆ ಬೀದಿಗಳ ಸಂಖ್ಯೆ ಬಹಿರಂಗವಾಗಿದೆ. ಇದರಲ್ಲಿ ಶೇ.54ರಷ್ಟು ಬೀದಿ ನಾಯಿಗಳಿಗೆ ಸಂತಾನಹರಣ ಚಿಕಿತ್ಸೆ ಮಾಡಲಾಗಿದೆ.

7 ವರ್ಷಗಳ ಬಳಿಕ ಪಾಲಿಕೆಯಿಂದ ಬೀದಿ ನಾಯಿಗಳ ಗಣತಿಯಾಗಿದೆ. ಆರ್.ಆರ್ ನಗರ, ಯಲಹಂಕ, ಬೊಮ್ಮನಹಳ್ಳಿ, ದಾಸರಹಳ್ಳಿ, ಮಹಾದೇವಪುರ ವಲಯಗಳಲ್ಲಿ ಹೆಚ್ಚಿನ ಬೀದಿ ನಾಯಿಗಳಿವೆ. ನಗರದ ಕೇಂದ್ರ ವಲಯದಲ್ಲಿ ಒಟ್ಟು 1,12,350 ಬೀದಿ ನಾಯಿಗಳಿದ್ದರೆ, ಹೊರ ವಲಯದಲ್ಲಿ 1,97,622 ಬೀದಿ ನಾಯಿಗಳಿವೆ.

ನಗರದಲ್ಲಿ ಇರುವ ಬೀದಿ ನಾಯಿಗಳ ಸಂಖ್ಯೆ ನಿಖರವಾಗಿ ಸಿಕ್ಕಿರುವ ಹಿನ್ನಲೆಯಲ್ಲಿ ಬಿಬಿಎಂಪಿಯ ಪಶುಸಂಗೋಪನಾ ವಿಭಾಗದ ಅಧಿಕಾರಿಗಳು ಬೀದಿ ನಾಯಿಗಳ ಹಾವಳಿ ಹಾಗೂ ನಿಯಂತ್ರಣ ಯೋಜನೆಗೆ ಪ್ಲಾನ್ ನಡೆಸಿದ್ದಾರೆ.

ಬೀದಿ ನಾಯಿಗಳ ವಿವರ:
ದಕ್ಷಿಣ ವಲಯದಲ್ಲಿ ಒಟ್ಟು 39,566 ನಾಯಿಗಳಿವೆ. ಅದರಲ್ಲಿ ಗಂಡು ನಾಯಿ 25,857 ಹಾಗೂ ಹೆಣ್ಣು ನಾಯಿ 13,709 ಇವೆ. ಪೂರ್ವ ವಲಯದಲ್ಲಿ ಗಂಡು ನಾಯಿ 26,214, ಹೆಣ್ಣು ನಾಯಿ 18,089 ಸೇರಿ ಒಟ್ಟು 44,303 ನಾಯಿಗಳಿವೆ. ಪಶ್ಚಿಮ ವಲಯದಲ್ಲಿ 14,614 ಗಂಡು ನಾಯಿ, 11,867 ಹೆಣ್ಣು ನಾಯಿ ಒಟ್ಟು 28,481 ನಾಯಿಗಳಿವೆ. ಯಲಹಂಕದಲ್ಲಿ 28,267 ಗಂಡು ನಾಯಿ, 7950 ಹೆಣ್ಣು ನಾಯಿ, ಒಟ್ಟು 36,217 ನಾಯಿಗಳಿವೆ.

30,060 ಗಂಡು ನಾಯಿ, 16,274 ಹೆಣ್ಣು ನಾಯಿ, ಒಟ್ಟು 46,334 ನಾಯಿಗಳು ಮಹದೇವಪುರದಲ್ಲಿವೆ. 26,273 ಗಂಡು ನಾಯಿ, 12,667 ಹೆಣ್ಣು ನಾಯಿ ಸೇರಿ ಒಟ್ಟು 38,940 ನಾಯಿಗಳು ಬೊಮ್ಮನಹಳ್ಳಿಯಲ್ಲಿ ಇವೆ. ದಾಸರಹಳ್ಳಿ 17,403 ಗಂಡು ನಾಯಿ, 5767 ಹೆಣ್ಣು ನಾಯಿ, ಒಟ್ಟು 23,170 ನಾಯಿಗಳು ಇವೆ. ಇತ್ತ ಆರ್.ಆರ್ ನಗರದಲ್ಲಿ 35,525 ಗಂಡು ನಾಯಿ, 17,436 ಹೆಣ್ಣು ನಾಯಿ, ಒಟ್ಟು 52,961 ನಾಯಿಗಳಿವೆ.

ಈ 8 ವಲಯಗಳು ಸೇರಿ ಗಂಡು ನಾಯಿಗಳು 2,06,213, ಹೆಣ್ಣು ನಾಯಿಗಳು 1,03,759, ಒಟ್ಟು 3,09,972 ಬೀದಿ ನಾಯಿಗಳು ಇವೆ ಎಂದು ಬಿಬಿಎಂಪಿ ಸಮೀಕ್ಷೆಯಿಂದ ತಿಳಿದು ಬಂದಿದೆ.

Comments

Leave a Reply

Your email address will not be published. Required fields are marked *