ಬೆಂಗ್ಳೂರಿನ ಬಾಲ ಮಂದಿರದ ಊಟದಲ್ಲಿ ಹಲ್ಲಿ – 103 ವಿದ್ಯಾರ್ಥಿಗಳು ಅಸ್ವಸ್ಥ

ಬೆಂಗಳೂರು: ನಗರದ ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಕಿದ್ವಾಯಿ ಆಸ್ಪತ್ರೆ ಬಳಿ ಇರುವ ಬಾಲಮಂದಿರದಲ್ಲಿ ಭಾನುವಾರ ರಾತ್ರಿ ಊಟ ಮಾಡಿದ್ದ 100ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಹಾಸ್ಟೆಲ್ ವಿದ್ಯಾರ್ಥಿಗಳು ಭಾನುವಾರ ರಾತ್ರಿ ಸುಮಾರು 8 ಗಂಟೆಗೆ ಊಟ ಮಾಡಿದ್ದಾರೆ. ಬಳಿಕ 12 ಗಂಟೆಯ ವೇಳೆಗೆ ಒಬ್ಬೊಬ್ಬರಾಗಿ ವಾಂತಿ ಮಾಡಿಕೊಂಡಿದ್ದಾರೆ. ಕೂಡಲೇ ಇಂದಿರಾ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿದೆ. 103 ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ.

ಊಟಕ್ಕೆ ಬಳಸಿದ್ದ ಪದಾರ್ಥಗಳು ಹಳಸಿರಬಹುದಾ ಅಥವಾ ಹಲ್ಲಿ ಬಿದ್ದಿದ್ದರಿಂದ ಈ ರೀತಿ ಆಗಿದೆಯಾ ಎಂಬ ಮಾಹಿತಿಯನ್ನು ಕಲೆ ಹಾಕ್ತಿದ್ದೇವೆ. ಮಕ್ಕಳ ಪರಿಸ್ಥಿತಿ ನೋಡಿ ಇಂದೇ ಡಿಸ್ಚಾರ್ಜ್ ಮಾಡುವ ಸಾಧ್ಯತೆ ಎಂದು ಇಂದಿರಾ ಗಾಂಧಿ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ಈಗಾಗಲೇ ಇಂದಿರಾಗಾಂಧಿ ಆಸ್ಪತ್ರೆಗೆ ಬೆಂಗಳೂರು ಜಿಲ್ಲಾಧಿಕಾರಿ ವಿಜಯ್ ಶಂಕರ್ ಭೇಟಿ ನೀಡಿದ್ದು, ಮಕ್ಕಳ ಆರೋಗ್ಯ ವಿಚಾರಿಸಿದ್ದಾರೆ.

ಮಕ್ಕಳ ಆರೋಗ್ಯ ವಿಚಾರಿಸಿ ಮಾಧ್ಯಮಗಳ ಜೊತೆ ಮಾತನಾಡಿದ ಜಿಲ್ಲಾಧಿಕಾರಿ ವಿಜಯ್ ಶಂಕರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಇಂಟರ್ ಗ್ರೇಟೆಂಡ್ ಚೈಲ್ಡ್ ಪ್ರೊಟೆಕ್ಟ್ ಸ್ಕೀಂ ನಲ್ಲಿ ಬಾಲಮಂದಿರ ನಡೆಯುತ್ತಿದೆ. ಭಾನುವಾರ ಸಂಜೆ ಅಡುಗೆ ಮಾಡಿ ಮಕ್ಕಳು ರಾತ್ರಿ ಊಟ ಮಾಡಿದ್ದಾರೆ. ನಂತರ ಮಕ್ಕಳು ಅಸ್ವಸ್ಥರಾಗಿದ್ದಾರೆ. ತಕ್ಷಣ 103 ಜನ ಮಕ್ಕಳನ್ನೂ ಇಂದಿರಾಗಾಂಧಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಎಲ್ಲಾ ಮಕ್ಕಳು ಆರೋಗ್ಯವಾಗಿದ್ದಾರೆ ಎಂದು ತಿಳಿಸಿದ್ದಾರೆ.

ಅಸ್ವಸ್ಥರಾಗಿದ್ದ ಮೂರು ಮಕ್ಕಳ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ನಡೆಯುತ್ತಿದೆ. ಸದ್ಯಕ್ಕೆ 40 ಮಕ್ಕಳು ಚಿಕಿತ್ಸೆಯಲ್ಲಿ ಇದ್ದಾರೆ. ಮಕ್ಕಳನ್ನು ಇಂದು ಮಧ್ಯಾಹ್ನ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗುತ್ತದೆ. ಅಡುಗೆ ಮಾಡಿದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ತಿಳಿಸಲಾಗಿದೆ. ಈಗಾಗಲೇ ಆಹಾರದ ಮಾದರಿಯನ್ನು ಲ್ಯಾಬ್ ಗೆ ಕಳಿಸಲಾಗಿದ್ದು, ವರದಿ ಬಂದ ನಂತರ ಮುಂದಿನ ತನಿಖೆ ಕೈಗೊಂಡು ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ವಿಜಯ್ ಶಂಕರ್ ಹೇಳಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *