ವಾಡಿಕೆಗಿಂತ ಕಡಿಮೆ ಮಳೆ – ಜೂನ್ 4 ರಂದು ಮುಂಗಾರು ಭಾರತಕ್ಕೆ ಪ್ರವೇಶ

ಬೆಂಗಳೂರು: ಮಾನ್ಸೂನ್ ಮಳೆಯು ದಕ್ಷಿಣ ಕರಾವಳಿಯನ್ನು ಜೂನ್ 4 ರಂದು ತಲುಪಲಿದ್ದು, ಈ ಬಾರಿ ವಾಡಿಕೆಗಿಂತ ಕಡಿಮೆ ಮಳೆಯಾಗಲಿದೆ ಎಂದು ಖಾಸಗಿ ಹವಾಮಾನ ಸಂಸ್ಥೆ ತಿಳಿಸಿದೆ.

ಭಾರತದ ಕೃಷಿ ಚಟುವಟಿಕೆಗಳಿಗೆ ಆಧಾರ ಸ್ತಂಭವಾದ ಮಾನ್ಸೂನ್ ಮಳೆಯೂ ಜೂನ್ 1ರಂದು ಕೇರಳ ರಾಜ್ಯದ ದಕ್ಷಿಣ ತುದಿಯನ್ನು ತಲುಪಲಿದೆ ಎಂದು ಸ್ಕೈಮೆಟ್ ಹೇಳಿದೆ.

ಜೂನ್ ನಿಂದ ಸೆಪ್ಟೆಂಬರ್‌ವರೆಗೆ ಮಳೆಯಾಗಲಿದ್ದು, 2019 ರಲ್ಲಿ ಮುಂಗಾರಿನ ದೀರ್ಘಾವಧಿ ಸರಾಸರಿ(ಎಲ್‍ಪಿಎ) ಶೇ.93 ರಷ್ಟು ಇರಲಿದೆ ಎಂದು ಸ್ಕೈಮೆಟ್ ವ್ಯವಸ್ಥಾಪಕ ನಿರ್ದೇಶಕ ಜತಿನ್ ಸಿಂಗ್ ತಿಳಿಸಿದ್ದಾರೆ.

ಹೆಚ್ಚಿನ ಪ್ರಮಾಣದಲ್ಲಿ ಅಕ್ಕಿ ಬೆಳೆಯುವ ದಕ್ಷಿಣ ಭಾರತದಲ್ಲಿ ಶೇ.95, ವಾಯುವ್ಯ ಭಾರತದಲ್ಲಿ ಶೇ.96, ಮಧ್ಯ ಭಾರತದಲ್ಲಿ ಶೇ.91, ಪೂರ್ವ ಮತ್ತು ಈಶಾನ್ಯ ಭಾರತದಲ್ಲಿ ಶೇ.92 ರಷ್ಟು ಮಳೆಯಾಗಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಭಾರತೀಯ ಹವಾಮಾನ ಇಲಾಖೆ ಎಲ್‍ಪಿಎ ಲೆಕ್ಕಾಚಾರವನ್ನು ಹಾಕಿ ಸಾಧಾರಣ, ಕೊರತೆ, ಅಧಿಕ ಮಳೆ ಎಂದು ವಿಂಗಡಿಸಿದೆ. ದೀರ್ಘಾವಧಿ ಸರಾಸರಿ 90-96ರಷ್ಟಿದ್ದರೆ ಅದು ಸಹಜಕ್ಕಿಂತ ಕಡಿಮೆ ಮಳೆ ಎಂದು ಪರಿಗಣಿಸಲಾಗುತ್ತದೆ. ಎಲ್‍ಪಿಎ 90ಕ್ಕಿಂತಲೂ ಕಡಿಮೆಯಿದ್ದರೆ ಅದನ್ನು ಕೊರತೆಯ ಮುಂಗಾರು ಎಂದು ಕರೆಯಲಾಗುತ್ತದೆ. ಎಲ್‍ಪಿಎ 104ಕ್ಕಿಂತ ಹೆಚ್ಚಿದ್ದರೆ ಅದು ಸಹಜಕ್ಕಿಂತ ಅಧಿಕ ಮಳೆ ಎಂದು ವಿಶ್ಲೇಷಿಸಲಾಗುತ್ತದೆ.

ಆರ್ಥಿಕತೆಯಲ್ಲಿ ಏಷ್ಯಾದ ಮೂರನೇ ಅತಿ ದೊಡ್ಡ ದೇಶವಾದ ಭಾರತ ಬೀಳುವ ವಾರ್ಷಿಕ ಮಳೆಯಲ್ಲಿ ಶೇ.70 ರಷ್ಟು ಮಳೆ ಮಾನ್ಸೂನ್ ಅವಧಿಯಲ್ಲಿ ಬೀಳುತ್ತದೆ.

Comments

Leave a Reply

Your email address will not be published. Required fields are marked *