ಅರಬ್ಬೀ ಸಮುದ್ರದಲ್ಲಿ ಹೈ ಅಲರ್ಟ್ ಘೋಷಣೆ- ಉಡುಪಿಯ 800 ಬೋಟುಗಳು ದಡದತ್ತ

ಉಡುಪಿ: ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದಿಂದ ಮುಂದಿನ ಐದು ದಿನ ಕರಾವಳಿಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಮೀನುಗಾರಿಕಾ ಇಲಾಖೆ ಮುಂಜಾಗ್ರತ ಕ್ರಮವಾಗಿ ಹೈ ಅಲರ್ಟ್ ಘೋಷಿಸಿದೆ. ಅಲ್ಲದೇ ಮೀನುಗಾರರು ಯಾವುದೇ ಕಾರಣಕ್ಕೂ ಸಮುದ್ರಕ್ಕೆ ಇಳಿಯಬಾರದೆಂದು ಸೂಚನೆ ನೀಡಿದೆ.

ಅರಬ್ಬೀ ಸಮುದ್ರದಲ್ಲಿ ಏಕಾಏಕಿ ವಾಯುಭಾರ ಕುಸಿತವಾಗಿದೆ. ಹೀಗಾಗಿ ಕರಾವಳಿಯಲ್ಲಿ ಮುಂದಿನ ಐದು ದಿನ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಸಮುದ್ರದಲ್ಲಿ ತೂಫಾನ್ ಎದ್ದರೆ ಮೊದಲು ಸಮಸ್ಯೆಯಾಗೋದು ಮೀನುಗಾರರಿಗೆ. ಹಾಗಾಗಿ ಸಮುದ್ರದ ಮಧ್ಯೆಯಿರುವ ಮೀನುಗಾರರನ್ನು ಇಲಾಖೆ ವಾಪಾಸ್ ಕರೆಸಿಕೊಳ್ಳುತ್ತಿದೆ.

ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ ಸುಮಾರು 800 ಬೋಟ್ ಗಳನ್ನು ಮಲ್ಪೆ ಮೀನುಗಾರರ ಸಂಘ ದಡಕ್ಕೆ ಬರುವಂತೆ ಸಂದೇಶ ರವಾನಿಸಿದೆ. ಕಳೆದ ಮೂರ್ನಾಲ್ಕು ದಿನದಿಂದ ಮಲ್ಪೆ ಬಂದರಿನಿಂದ ಸುಮಾರು 800 ಬೋಟುಗಳು ಸಮುದ್ರದ ಮಧ್ಯೆ ಮೀನುಗಾರಿಕೆ ನಡೆಸುತ್ತಿದ್ದು, ತೂಫಾನ್ ಬರುವ ಹಿನ್ನೆಲೆಯಲ್ಲಿ ಎಲ್ಲಾ ಬೋಟ್ ಗಳನ್ನು ಬಂದರಿಗೆ ವಾಪಾಸ್ ಕರೆಸಿಕೊಳ್ಳಲಾಗುತ್ತಿದೆ. ಅಕ್ಟೋಬರ್ 5 ರಿಂದ 10ರ ವರೆಗೆ ಐದು ದಿನಗಳ ಕಾಲ ಅರಬ್ಬೀ ಸಮುದ್ರಕ್ಕೆ ತೆರಳದೇ ಬೋಟ್ ಗಳೆಲ್ಲಾ ಬಂದರಿನಲ್ಲೇ ಲಂಗರು ಹಾಕಲಿದೆ.

ಈಗಾಗಲೇ ಮಲ್ಪೆ ಬಂದರಿನಲ್ಲಿ ಎಚ್ಚರಿಕಾ ಕರೆಗಂಟೆ ಮೊಳಗಿಸಲಾಗಿದೆ. ಮೀನುಗಾರರ ಮಾತೃಸಂಘದ ಮೂಲಕ ಐದು ಕಡೆಗಳಲ್ಲಿ ಮೈಕ್ ಮೂಲಕ ಎಚ್ಚರಿಕೆ ಸಂದೇಶ ನೀಡುತ್ತಿದ್ದಾರೆ. ಸಮುದ್ರಕ್ಕೆ ಹೋದ ಬೋಟ್ ಗಳಿಗೆ ವೈರ್‍ಲೆಸ್ ಮೂಲಕ ಸಂದೇಶ ರವಾನೆ ಮಾಡಲಾಗಿದೆ. ಕರಾವಳಿ ಕಾವಲು ಪಡೆ ಪೊಲೀಸರು ಕೂಡಾ ಸಮುದ್ರದಾದ್ಯಂತ ಗಸ್ತು ಸುತ್ತಿ ಎಚ್ಚರಿಕೆ ನೀಡುತ್ತಿದ್ದಾರೆ.

ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಸತೀಶ್ ಕುಂದರ್, ಈ ಬಾರಿ ಮೀನುಗಾರಿಕೆಯೂ ಕಮ್ಮಿ. ಅಲ್ಲದೇ ಡೀಸೆಲ್ ದರ ಸಿಕ್ಕಾಪಟ್ಟೆ ಏರಿಕೆಯಾಗಿದೆ. ಇದೀಗ ಐದು ದಿನ ಹೈ ಅಲರ್ಟ್ ಘೋಷಣೆಯಾಗಿದೆ. ಹೀಗಾಗಿ ಸಮುದ್ರಕ್ಕೆ ಇಳಿಯಲು ಸಾಧ್ಯವಾಗುತ್ತಿಲ್ಲ. ವಾಯುಭಾರ ಕುಸಿತದ ಸಂದರ್ಭ ಯಾರೂ ಸಮುದ್ರಕ್ಕೆ ಇಳಿಯದಂತೆ ನೋಡಿಕೊಳ್ಳುತ್ತೇವೆ. ಕೋಟ್ಯಾಂತರ ರೂಪಾಯಿ ವೆಚ್ಚದ ಬೋಟ್ ಹಾಗೂ ಅದಕ್ಕಿಂತ ಅಮೂಲ್ಯವಾದ ಮೀನುಗಾರರ ಪ್ರಾಣ ಮುಖ್ಯ ಅಂತ ಹೇಳಿದರು.

ಮಹಾರಾಷ್ಟ್ರ- ಗೋವಾ ಬಾರ್ಡರ್ ದಾಟಿ ಹೋದ ಮೀನುಗಾರರನ್ನು ಸಂಪರ್ಕ ಮಾಡುವುದು ಬಹಳ ಕಷ್ಟಕರ. ಒಬ್ಬರಿಂದ ಒಬ್ಬರು ಮಾಹಿತಿ ಪಡೆದು ಸುರಕ್ಷಿತ ಸ್ಥಳಕ್ಕೆ ಹೋಗಬೇಕು. ಹೊರ ರಾಜ್ಯದಲ್ಲಿ ಕೂಡಾ ಬೋಟ್ ಗಳು ನೆಲೆ ಕಂಡುಕೊಳ್ಳಬಹುದು ಎಂದು ತಿಳಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *