ಸಾವಿನ ಜ್ವರಕ್ಕೆ ಬೆಚ್ಚಿಬಿದ್ದ ಮಲೆನಾಡು ಮಂದಿ- 7 ಜನರ ಸಾವಿನ ಬಳಿಕ ಎಚ್ಚೆತ್ತ ಸರ್ಕಾರ..!

ಶಿವಮೊಗ್ಗ: ಜಿಲ್ಲೆಗೆ ಮಹಾಮಾರಿಯಂತೆ ದಾಳಿ ಮಾಡಿರುವ ಮಂಗನ ಜ್ವರಕ್ಕೆ ಏಳು ಜನ ಬಲಿಯಾದ ಮೇಲೆ ಸರ್ಕಾರ ಎಚ್ಚೆತ್ತಿದೆ.

ಮಲೆನಾಡಿನಲ್ಲಿ ಮಂಗನಜ್ವರ ಅಥವಾ ಕ್ಯಾಸನೂರು ಡಿಸೀಸ್ ಅಂತ ಕರೆಯಲಾಗುವ ಸಾವಿನ ಜ್ವರಕ್ಕೆ 7 ದಶಕಗಳ ನಂಟಿದೆ. 1957ರಲ್ಲಿ ಮೊಟ್ಟಮೊದಲು ಸೊರಬ ತಾಲೂಕಿನ ಕ್ಯಾಸನೂರಿನಲ್ಲಿ ಕಾಣಿಸಿಕೊಂಡಿತು. ಅಲ್ಲಿನ ಕಾಡಿನಲ್ಲಿ ಮಂಗಗಳು ಸತ್ತು ಬೀಳತೊಡಗಿದವು. ಅಂದಿನಿಂದ ಇಂದಿನವರೆಗೂ ಪ್ರತೀ ವರ್ಷ ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಈ ಜ್ವರ ಕಾಣಿಸುತ್ತಲೇ ಇದೆ. ಈ ವರ್ಷ ನೂರಕ್ಕೂ ಹೆಚ್ಚು ಜನ ಜ್ವರದಿಂದ ಬಳಲುತ್ತಿದ್ದು, ಏಳು ಜನ ಮೃತಪಟ್ಟಿದ್ದಾರೆ. ಹತ್ತಕ್ಕೂ ಹೆಚ್ಚು ಜನ ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ಪ್ರತಿಪಕ್ಷದ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಸೊರಬ ತಾಲೂಕಿನ ಕ್ಯಾಸನೂರು ಬಳಿಯ ಗುಡವಿ ಪಕ್ಷಿಧಾಮಕ್ಕೆ ರಷ್ಯಾದಿಂದ ಇಲ್ಲಿಗೆ ಪಕ್ಷಿಗಳು ವಲಸೆ ಬರುತ್ತವೆ. ಈ ಪಕ್ಷಿಗಳ ಮೂಲಕ ಜೈವಿಕ ಅಸ್ತ್ರವಾಗಿ ಭಾರತಕ್ಕೆ ಕಾಯಿಲೆಯನ್ನು ಕಳುಹಿಸಿಲಾಗಿದೆ ಅಂತ ಪಕ್ಷಿತಜ್ಞ ಸಲೀಂ ಅಲಿ ದಶಕಗಳ ಮುಂಚೆಯೇ ಹೇಳಿದ್ದರು. ಈ ಕುರಿತ ಸಂಶೋಧನೆಗಳು ಸರ್ಕಾರಗಳ ನಿರ್ಲಕ್ಷ್ಯದಿಂದ ಸ್ಥಗಿತಗೊಂಡಿವೆ. ಈಗ 7 ಮಂದಿ ಬಲಿಯಾಗಿದ್ದು, ಇದರಲ್ಲಿ ಸರ್ಕಾರದ ನಿರ್ಲಕ್ಷ್ಯ ಇರುವುದನ್ನು ನಾವು ಒಪ್ಪಿಕೊಂಡಿದ್ದೇವೆ. ಈ ಬಗ್ಗೆ ತನಿಖೆಗೆ ಸಮಿತಿ ರಚಿಸಲಾಗುವುದು. ಮೃತ ಕುಟುಂಬಗಳಿಗೆ ಪರಿಹಾರ ಘೋಷಿಸಲಾಗಿದೆ ಎಂದು ಆರೋಗ್ಯ ಸಚಿವ ಶಿವಾನಂದ ಪಾಟೀಲ್ ಹೇಳಿದ್ದಾರೆ.

ವೈದ್ಯಕೀಯ ಲೋಕಕ್ಕೆ ಸವಾಲಾಗಿರುವ ಈ ಜ್ವರಕ್ಕೆ ಶಾಶ್ವತ ಪರಿಹಾರ ಕಂಡು ಹಿಡಿಯಲು ಸರ್ಕಾರ ಸಂಪೂರ್ಣ ವಿಫಲಗೊಂಡಿದೆ. ಪ್ರತೀ ವರ್ಷ ಜನ ಸಾಯುತ್ತಲೇ ಇದ್ದಾರೆ. ಜನ ಸತ್ತಾಗ ಸಚಿವರು ಬಂದು ಸಾಂತ್ವನ ಹೇಳುತ್ತಿದ್ದಾರೆ. ಆದರೆ ಅಮಾಯಕರು ಮಾತ್ರ ನರಳುತ್ತಲೇ ಇದ್ದಾರೆ ಎಂದು ಸ್ಥಳೀಯ ಶಾಂತಮ್ಮ ತಿಳಿಸಿದ್ದಾರೆ.

ಸಾಗರದ ಮಂಡವಳ್ಳಿಯ ಪಾರ್ಶ್ವನಾಥ ಜೈನ್, ವಾಟೆಮಕ್ಕಿಯ ಕೃಷ್ಣಪ್ಪ, ಕಂಚಿಕಾಯಿ ಮಂಜುನಾಥ್ ಮತ್ತು ತೀರ್ಥಹಳ್ಳಿಯ ಗಂಟೆ ಜಾನಗಲು ಗ್ರಾಮದ ಸುಂದರಿ, ಕಂಚಿಕಾಯಿ ರಾಮಕ್ಕ, ಅರಕಲಗೋಡು ಗ್ರಾಮದ ಶ್ವೇತ ಎಂಬವರು ಮಂಗನ ಜ್ವರಕ್ಕೆ ತುತ್ತಾದ ದುರ್ದೈವಿಗಳು. ಶಿವಮೊಗ್ಗ ಜಿಲ್ಲೆಯ ಸಾಗರ, ತೀರ್ಥಹಳ್ಳಿ, ಹೊಸನಗರ, ಸೊರಬ ತಾಲೂಕುಗಳಲ್ಲಿ ಪ್ರತೀ ವರ್ಷ ಬೇಸಿಗೆಯಲ್ಲಿ ಕಾಣಿಸಿಕೊಳ್ಳುತ್ತಿದ್ದ ಮಂಗನ ಜ್ವರ ಈ ವರ್ಷ ಮೂರು ತಿಂಗಳು ಮೊದಲೇ ಕಾಣಿಸಿಕೊಂಡು ಏಳು ಜನರನ್ನು ಬಲಿ ತೆಗೆದುಕೊಂಡಿದೆ.

ಸಾವಿನ ಕೂಪಕ್ಕೆ ತಳ್ಳವ ಮಂಗನ ಕಾಯಿಲೆಯಿಂದ ಸಾವು ಸಂಭವಿಸಿದ ವೇಳೆ ಸರ್ಕಾರ ಕೇವಲ ಭರವಸೆ ನೀಡಲು ಸೀಮಿತವಾಗದೇ ಶಾಶ್ವತ ಪರಿಹಾರ ಹುಡುಕಲು ಮುಂದಾಗಬೇಕಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *