ಮಹಮ್ಮದ್ ಶಮಿ ಮ್ಯಾಚ್ ಫಿಕ್ಸಿಂಗ್ ಪ್ರಕರಣ – ಕ್ಲೀನ್ ಚಿಟ್ ನೀಡಿದ ಬಿಸಿಸಿಐ

ಮುಂಬೈ: ಟೀಂ ಇಂಡಿಯಾ ವೇಗಿ ಮಹಮ್ಮದ್ ಶಮಿ ವಿರುದ್ಧ ಮ್ಯಾಚ್ ಫಿಕ್ಸಿಂಗ್ ಆರೋಪಕ್ಕೆ ಸಂಬಂಧಿಸಿದಂತೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಗುರುವಾರ ಕ್ಲೀನ್ ಚಿಟ್ ನೀಡಿದೆ.

ಬಿಸಿಸಿಐ ನ ಭ್ರಷ್ಟಾಚಾರ ನಿಗ್ರಹ ಘಟಕ(ಎಸಿಯು)ಕ್ಕೆ ಶಮಿ ವಿರುದ್ಧದ ಪತ್ನಿ ಮಾಡಿರುವ ಆರೋಪದ ಬಗ್ಗೆ ತನಿಖೆ ನಡೆಸಲು ಆಡಳಿತಾಧಿಕಾರಿಗಳ ಸಮಿತಿ (ಸಿಒಎ) ಎಸಿಯು ಮುಖ್ಯಸ್ಥ ನೀರಜ್ ಕುಮಾರ್ ಅವರಿಗೆ ಸೂಚಿಸಿತ್ತು.

ಕಳೆದ ಕೆಲ ದಿನಗಳ ಹಿಂದೆ ಬಿಡುಗಡೆಯಾಗಿದ್ದ  ಬಿಸಿಸಿಐ ವಾರ್ಷಿಕ ಆಟಗಾರರ ಪಟ್ಟಿಯಿಂದ ಶಮಿ ಅವರನ್ನು ಕೈ ಬಿಟ್ಟಿತ್ತು. ಪ್ರಸ್ತುತ ಬಿಸಿಸಿಐ ನಿಂದ ಕ್ಲೀನ್ ಚಿಟ್ ಪಡೆದಿರುವ ಶಮಿ ಗ್ರೇಡ್ `ಬಿ’ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ವಾರ್ಷಿಕ ಮೂರು ಕೋಟಿ ರೂ. ಸಂಭಾವನೆಯನ್ನು ಪಡೆಯಲಿದ್ದಾರೆ. ಅಲ್ಲದೇ ಏಪ್ರಿಲ್ 07 ರಿಂದ ಆರಂಭವಾಗುವ ಐಪಿಎಲ್ 11 ನೇ ಅವೃತ್ತಿಯಲ್ಲಿ ಆಡುವ ಅವಕಾಶವನ್ನು ಪಡೆದಿದ್ದಾರೆ.

ಮಹಮ್ಮದ್ ಶಮಿ ವಿರುದ್ಧ ಪತ್ನಿ ಹಸೀನ್ ಜಹಾನ್ ಆರೋಪಗಳನ್ನು ಮಾಡಿದ ಬಳಿಕ ಕೌಟುಂಬಿಕ ದೌರ್ಜನ್ಯ ಕಾಯ್ದೆ ಅಡಿ ಎಫ್‍ಐಆರ್ ದಾಖಲಿಸಲಾಗಿತ್ತು. ಈ ವೇಳೆ ಬಿಸಿಸಿಐ ತನ್ನ ವಾರ್ಷಿಕ ಸದಸ್ಯರ ಪಟ್ಟಿಯಿಂದ ಶಮಿ ಅವರನ್ನು ಹೊರಗಿಟ್ಟಿತ್ತು. ಆದರೆ ಶಮಿ ಆರಂಭದಿಂದಲೂ ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸುತ್ತ ಬಂದಿದ್ದರು.

ಹಸೀನ್ ಅವರು ಶಮಿ ಅವರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದರು. ಪಾಕಿಸ್ತಾನ ಮೂಲದ ನಟಿ ಜೊತೆ ಶಮಿ ಸಂಪರ್ಕ ಹೊಂದಿದ್ದು, ಮಹಮ್ಮದ್ ಭಾಯ್ ಎಂಬುವರ ಮೂಲಕ ಹಣ ಪಡೆದಿದ್ದಾರೆ ಎಂದು ಆರೋಪಿಸಿದ್ದರು.

ಪ್ರಸ್ತುತ ಎಸಿಯು ಮುಖ್ಯಸ್ಥ ನೀರಜ್ ಕುಮಾರ್ ಅವರು ಶಮಿ ಅವರ ವಿರುದ್ಧ ನಡೆಸಿದ ತನಿಖೆಯ ವರದಿಯನ್ನು ಬಿಸಿಸಿಐ ಗೆ ಸಲ್ಲಿಸಿದ್ದಾರೆ. ಈ ವರದಿಯಲ್ಲಿ ಪ್ರಕರಣದ ಕುರಿತು ಹೆಚ್ಚಿನ ವಿಚಾರಣೆಗಳು ಅಗತ್ಯವಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಲಾಗಿದೆ ಎನ್ನಲಾಗಿದ್ದು, ವರದಿಯ ಅಭಿಪ್ರಾಯದಂತೆ ಬಿಸಿಸಿಐ ಭ್ರಷ್ಟಾಚಾರ ನಿಗ್ರಹ ಸಂಹಿತೆ ಅಡಿ ಶಮಿ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿರಲು ನಿರ್ಧರಿಸಿದೆ.

ಇದಕ್ಕೂ ಮುನ್ನ ಮಹ್ಮಮದ್ ಶಮಿ ವಿರುದ್ಧ ಕೊಲ್ಕತ್ತ ಲಾಲ್ ಬಜಾರ್ ಪೊಲೀಸ್ ಠಾಣೆಯಲ್ಲಿ ಹಸೀನ್ ದೂರು ಕೂಡ ದಾಖಲಿಸಿದ್ದರು, ಅಲ್ಲದೇ ಪತಿ ಶಮಿಗೆ ಇಬ್ಬರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾರೆ ಎಂದು ಆರೋಪಿಸಿ ಫೇಸ್‍ಬುಕ್ ನಲ್ಲಿ  ಪೋಸ್ಟ್ ಮಾಡಿದ್ದರು.

 

Comments

Leave a Reply

Your email address will not be published. Required fields are marked *