ರನ್ನಿಂಗ್ ಕ್ಯಾಚ್ ಹಿಡಿದು ಸ್ವಚ್ಛ ಕೈಗಳ ಸಂದೇಶ ಕೊಟ್ಟ ಕೈಫ್

ಮುಂಬೈ: ತಮ್ಮ ಜೀವನದ ಬೆಸ್ಟ್ ಕ್ಯಾಚಿಂಗ್ ವಿಡಿಯೋವೊಂದನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿರುವ ಭಾರತದ ಮಾಜಿ ಆಟಗಾರ ಮೊಹಮ್ಮದ್ ಕೈಫ್ ಅವರು ಸ್ವಚ್ಛ ಕೈಗಳ ಬಗ್ಗೆ ಉತ್ತಮ ಸಂದೇಶ ನೀಡಿದ್ದಾರೆ.

ಕೊರೊನಾ ವೈರಸ್ ಹರಡು ಭೀತಿಯಲ್ಲಿ ಇಡೀ ದೇಶವೇ ಸ್ತಬ್ಧವಾಗಿದೆ. ಇಡೀ ದೇಶವೇ ಲಾಕ್‍ಡೌನ್ ಆದರೂ ಮಹಾಮಾರಿ ಕೊರೊನಾ ಮಾತ್ರ ದಿನೇ ದಿನೇ ಹೆಚ್ಚಾಗುತ್ತಿದೆ. ಕೊರೊನಾದಿಂದ ಎಚ್ಚರವಹಿಸಲು ಕ್ರೀಡಾಪಟುಗಳು ಮತ್ತು ಸೆಲೆಬ್ರಿಟಿಗಳು ಸಾಮಾಜಿಕ ಜಾಲತಾಣದಲ್ಲಿ ಅರಿವು ಮೂಡಿಸುತ್ತಲೇ ಇದ್ದಾರೆ. ಅಂತಯೇ ಮೊಹಮ್ಮದ್ ಕೈಫ್ ಕೂಡ ಟ್ವಿಟ್ಟರ್ ನಲ್ಲಿ ಕೈಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ ಎಂದು ತಿಳಿ ಹೇಳಿದ್ದಾರೆ.

ಈ ವಿಚಾರವಾಗಿ ಟ್ವೀಟ್‍ವೊಂದನ್ನು ಮಾಡಿರುವ ಕೈಫ್, ಇಂಗ್ಲೆಂಡ್ ತಂಡದ ವಿರುದ್ಧ ತಾವು ಹಿಡಿದಿರುವ ರನ್ನಿಂಗ್ ಕ್ಯಾಚ್‍ವೊಂದರ ವಿಡಿಯೋವನ್ನು ಟ್ವೀಟ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಯುವರಾಜ್ ಸಿಂಗ್ ಅವರು ಬೌಲಿಂಗ್ ಮಾಡಿದ್ದು, ಬ್ಯಾಟ್ಸ್ ಮ್ಯಾನ್ ಹೊಡೆದ ಬಾಲನ್ನು ಕೈಫ್ ತಮ್ಮ ಬಲಭಾಗಕ್ಕೆ ಓಡಿಹೋಗಿ ನಗೆದು ಕ್ಯಾಚ್ ಹಿಡಿಯುತ್ತಾರೆ. ಇದರ ಜೊತೆಗೆ ಉತ್ತಮ ಕೈಗಳು ಹೇಗೆ ಕ್ಯಾಚ್ ಬಿಡುವುದಿಲ್ಲವೋ ಹಾಗೇ ಸ್ವಚ್ಛ ಕೈಗಳಿಗೆ ವೈರಸ್ ಅಂಟುವುದಿಲ್ಲ ಎಂದು ಬರೆದು ಕೈಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ ಎಂಬ ಸಂದೇಶ ನೀಡಿದ್ದಾರೆ.

ಈ ಹಿಂದೆಯೂ ಕೂಡ ಮೋದಿ ಅವರ ಜನತಾ ಕರ್ಫ್ಯೂಗೆ ಬೆಂಬಲ ನೀಡಿ ಟ್ವೀಟ್ ಮಾಡಿದ್ದ ಕೈಫ್ ಅವರು, ನರೇಂದ್ರ ಮೋದಿ ಅವರು ನಮ್ಮ ದೇಶ ಕೊರೊನಾ ವೈರಸ್ ವಿರುದ್ಧ ಹೋರಾಡಲು ಒಳ್ಳೆಯ ಸಂದೇಶ ಕೊಟ್ಟಿದ್ದಾರೆ. ಮುಂಬರುವ ಸವಾಲುಗಳಿಗೆ ನಮ್ಮನ್ನು ಸಿದ್ಧಪಡಿಸಲು ಮೋದಿ ಜನತಾ ಕರ್ಫ್ಯೂ ಹಾಕಿದ್ದಾರೆ. ಅಗತ್ಯವಿರುವ ವಸ್ತುಗಳನ್ನು ಖರೀದಿ ಮಾಡಲು ಭಯಪಡಬೇಡಿ. ನಮ್ಮ ಪ್ರೀತಿ ಪಾತ್ರರು ಮತ್ತು ನಮ್ಮ ದೇಶದ ಜನರ ಯೋಗಕ್ಷೇಮದ ಜವಾಬ್ದಾರಿಯನ್ನು ನಾವು ತಗೆದುಕೊಳ್ಳುವ ಸಮಯವಿದು ಎಂದು ಬರೆದುಕೊಂಡಿದ್ದರು.

ಜನತಾ ಕಫ್ರ್ಯೂ ಸಲುವಾಗಿ ಟ್ವೀಟ್ ಮಾಡಿದ್ದ ಕೈಫ್ ಮತ್ತು ಯುವರಾಜ್ ಇಬ್ಬರ ಟ್ವೀಟ್‍ಗೆ ರೀಟ್ವೀಟ್ ಮಾಡಿದ್ದ ಪ್ರಧಾನಿ ಮೋದಿ ಅವರು, ಇಬ್ಬರು ಅತ್ಯುತ್ತಮ ಕ್ರಿಕೆಟಿಗರು ಇಲ್ಲಿದ್ದಾರೆ. ಅವರ ಜೊತೆಯಾಟವನ್ನು ನಾವು ಶಾಶ್ವತವಾಗಿ ನೆನಪಿಸಿಕೊಳ್ಳುತ್ತೇವೆ. ಈಗ ಅವರು ಹೇಳಿದಂತೆ ಇದು ಮತ್ತೊಂದು ಜೊತೆಯಾಟದ ಸಮಯ. ಈ ಬಾರಿ ಇಡೀ ಭಾರತವೇ ಒಂದು ಒಳ್ಳೆಯ ಜೊತೆಯಾಟವಾಗಿ ಕೊರೊನಾ ವೈರಸ್ ವಿರುದ್ಧದ ಹೋರಾಟ ಮಾಡಬೇಕು ಎಂದು ಹೇಳಿದ್ದರು.

Comments

Leave a Reply

Your email address will not be published. Required fields are marked *