ಇಂದು ಮೋದಿಯ ಐತಿಹಾಸಿಕ ಇಸ್ರೇಲ್ ಪ್ರವಾಸ ಆರಂಭ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮೂರು ದಿನಗಳ ಭೇಟಿಗಾಗಿ ಇಸ್ರೇಲ್‍ಗೆ ಪ್ರಯಾಣ ಬೆಳೆಸಿದ್ದಾರೆ. ಈ ಭೇಟಿ ದ್ವಿಪಕ್ಷೀಯ ಸಂಬಂಧದ ದೃಷ್ಟಿಯಿಂದ ಹೆಚ್ಚಿನ ಮಹತ್ವ ಪಡೆದುಕೊಂಡಿದೆ.

ಇಸ್ರೇಲ್ ಜೊತೆಗಿನ ರಾಜತಾಂತ್ರಿಕ ಬಾಂಧವ್ಯಕ್ಕೆ 25 ವರ್ಷಗಳು ತುಂಬಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಇಂದು ಇಸ್ರೇಲ್ ಪ್ರವಾಸ ಕೈಗೊಂಡಿದ್ದಾರೆ. ಪ್ರಧಾನಿ ನೆತಾನ್ಯಾಹು ಅವರೇ ಖುದ್ದಾಗಿ ಪ್ರಧಾನಿ ಮೋದಿಯನ್ನು ಸ್ವಾಗತಿಸಲಿದ್ದಾರೆ. 48 ಗಂಟೆಗಳ ಅವಧಿಯಲ್ಲಿ ಪ್ರಧಾನಿ ಮೋದಿ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.

ಭಯೋತ್ಪಾದನೆಯನ್ನು ಮಟ್ಟಹಾಕುವ ಸಂಬಂಧ ಇಸ್ರೇಲ್ ಪ್ರವಾಸ ತುಂಬಾ ಮಹತ್ವದ್ದು ಎಂದು ಪ್ರಧಾನಿ ನರೇಂದ್ರ ಮೋದಿ ಪ್ರವಾಸಕ್ಕೂ ಮುನ್ನ ಟ್ವೀಟ್ ಮಾಡಿದ್ದಾರೆ. ಯಹೂದಿ ರಾಜ್ಯಕ್ಕೆ ಭೇಟಿ ಮೋದಿ ನೀಡುತ್ತಿರುವುದು ಅಲ್ಲಿಯೂ ಭಾರೀ ಸಂಚಲನ ಮೂಡಿಸಿದೆ.

ಮೋದಿ ಭೇಟಿ ಕುರಿತು ಮಾತನಾಡಿರುವ ಇಸ್ರೇಲ್ ಪ್ರಧಾನಿ ನೇತನ್ಯಾಹು, ಮೋದಿ ನನ್ನ ಮಿತ್ರ. ಅತಿ ವೇಗವಾಗಿ ಆರ್ಥಿಕ ಬೆಳವಣಿಗೆ ಕಾಣುತ್ತಿರುವ ದೇಶದ ಪ್ರಧಾನಿ ಭೇಟಿಯಿಂದ ಉಭಯ ದೇಶಗಳ ನಡುವಿನ ಸಂಬಂಧ ಮತ್ತಷ್ಟು ಗಟ್ಟಿಯಾಗಲಿದೆ ಎಂದು ಹೇಳಿದ್ದಾರೆ. ಇನ್ನು ಇಸ್ರೇಲ್‍ನ ಪ್ರಮುಖ ಬ್ಯುಸಿನೆಸ್ ದಿನ ಪತ್ರಿಕೆ `ದಿ ಮಾರ್ಕ್’, ಏಳಿ, ಎದ್ದೇಳಿ, ವಿಶ್ವದ ಅತ್ಯಂತ ಪ್ರಮುಖ ಪ್ರಧಾನಿ ಬರುತ್ತಿದ್ದಾರೆ ಎಂದು ಕೆಲ ದಿನಗಳ ಹಿಂದಷ್ಟೇ ಹಾಡಿ ಹೊಗಳಿತ್ತು.

ಜುಲೈ 6ರಂದು ಮೋದಿ ಜರ್ಮನಿಯ ಹ್ಯಾಮ್‍ಬರ್ಗ್‍ಗೆ ಜಿ-20 ಶೃಂಗಸಭೆಗಾಗಿ ತೆರಳಲಿದ್ದಾರೆ.

 

Comments

Leave a Reply

Your email address will not be published. Required fields are marked *