ಮೋದಿ ಆಧುನಿಕ ಔರಂಗಜೇಬ್: ಸಂಜಯ್ ನಿರುಪಮ್

ಲಕ್ನೋ: ಪ್ರಧಾನಿ ನರೇಂದ್ರ ಮೋದಿ ಅವರು ಆಧುನಿಕ ಔರಂಗಜೇಬ್ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಸಂಜಯ್ ನಿರುಪಮ್ ಹೇಳಿದ್ದಾರೆ.

ಉತ್ತರ ಪ್ರದೇಶದ ವಾರಣಾಸಿ ಲೋಕಸಭಾ ಕ್ಷೇತ್ರದಲ್ಲಿ ಪ್ರಚಾರ ನಡೆಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರು ಕಾರಿಡಾರ್ ಯೋಜನೆಗಾಗಿ ನಗರದಲ್ಲಿದ್ದ ನೂರಾರು ದೇವಸ್ಥಾನಗಳನ್ನು ನಾಶ ಮಾಡಿದ್ದಾರೆ. ಮೊಘಲ್ ಚಕ್ರವರ್ತಿ ಔರಂಗಜೇಬ್ ಕೂಡ ಅನೇಕ ಹಿಂದೂ ದೇವಸ್ಥಾನಗಳನ್ನು ನಾಶ ಮಾಡಿದ್ದ. ಈ ಹಿಂದೆ ಔರಂಗಜೇಬ್ ಮಾಡಿದ್ದನ್ನು ಮೋದಿ ಈಗ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಬಾಬಾ ವಿಶ್ವನಾಥ ದೇವಸ್ಥಾನ ಪ್ರವೇಶಕ್ಕೆ ಹಾಗೂ ದೇವರ ದರ್ಶನ ಪಡೆಯಲು 500 ರೂ. ಶುಲ್ಕ ನಿಗದಿ ಮಾಡಿದ್ದಾರೆ. ಔರಂಗಜೇಬ್ ಮಾಡದೇ ಇರುವುದನ್ನು ನರೇಂದ್ರ ಮೋದಿ ಮಾಡುತ್ತಿದ್ದಾರೆ. ಹಿಂದೂಗಳ ಮೇಲೆ ಔರಂಗಜೇಬ್ ದರ್ಪ ಮೆರೆದ, ಶೋಷಣೆ ಮಾಡಿದ. ಈಗ ಅದನ್ನು ಮೋದಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಪ್ರಧಾನಿ ಮೋದಿ ದುರ್ಯೋಧನ ಇದ್ದಂತೆ ಎಂದು ಉತ್ತರ ಪ್ರದೇಶ ಪೂರ್ವದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಅವರು ನಿನ್ನೆಯಷ್ಟೇ ಹೇಳಿದ್ದರು. ಹರ್ಯಾಣದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ್ದ ಅವರು, ಭಾರತದ ನೆಲದಲ್ಲಿ ಅಹಂಕಾರದಿಂದ ನಡೆದುಕೊಳ್ಳುವ ವ್ಯಕ್ತಿಗಳಿಗೆ ತಕ್ಕ ಶಿಕ್ಷೆಯಾಗಿದೆ. ಮಹಾಭಾರತದಲ್ಲಿ ದುರ್ಯೋಧನ ಅಹಂಕಾರದಿಂದ ನಡೆದುಕೊಂಡ. ಕೃಷ್ಣ ಸಂಧಾನಕ್ಕೆ ಬಂದರೂ ಒಪ್ಪಲಿಲ್ಲ. ಕೊನೆಗೆ ದುರ್ಯೋಧನ ನಾಶವಾಗಿ ಹೋದ. ದುರ್ಯೋಧನ ರೀತಿಯಲ್ಲಿಯೇ ಮೋದಿಯವರು ಕೂಡ ಅಹಂಕಾರದಿಂದ ನಡೆದುಕೊಳ್ಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದರು.

Comments

Leave a Reply

Your email address will not be published. Required fields are marked *