Modi In Ayodhya: ಪ್ರಧಾನಿ ಮೋದಿಯಿಂದ ʻಮಹರ್ಷಿ ವಾಲ್ಮೀಕಿ ವಿಮಾನ ನಿಲ್ದಾಣʼ ಲೋಕಾರ್ಪಣೆ

ಅಯೋಧ್ಯೆ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಿರ್ಮಾಣಗೊಂಡಿರುವ 5 ಸ್ಟಾರ್‌ ದರ್ಜೆ ಸೌಲಭ್ಯವುಳ್ಳ ಮಹರ್ಷಿ ವಾಲ್ಮೀಕಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಉದ್ಘಾಟನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ನೆರವೇರಿಸಿದರು.

ಕಾರ್ಯಕ್ರಮಕ್ಕೆ ಮುಂಚಿತವಾಗಿಯೇ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿದ್ದ ಪ್ರಧಾನಿ ಮೋದಿ, ಸಿಎಂ ಯೋಗಿ ಆದಿತ್ಯನಾಥ್‌ ಅವರಿಂದ ಸಂಪೂರ್ಣ ಮಾಹಿತಿ ಪಡೆದರು. ಇದನ್ನೂ ಓದಿ: ಕರ್ನಾಟಕದ 3 ರೈಲು ಸೇರಿ 8 ಹೊಸ ರೈಲುಗಳಿಗೆ ಮೋದಿ ಹಸಿರು ನಿಶಾನೆ

ಅಯೋಧ್ಯೆ ನಗರದಿಂದ 15 ಕಿ.ಮೀ. ದೂರದಲ್ಲಿರುವ ವಿಮಾನ ನಿಲ್ದಾಣ 6,500 ಚದರ ಮೀಟರ್ ವ್ಯಾಪ್ತಿ ಹೊಂದಿದೆ. ವಾರ್ಷಿಕ 10 ಲಕ್ಷ ಪ್ರಯಾಣಿಕರ ಸಾಮರ್ಥ್ಯ ಹೊಂದಿದ್ದು ಏರ್‌ಬಸ್-ಬೋಯಿಂಗ್‌ನಂತಹ ದೈತ್ಯ ವಿಮಾನಗಳು ಸಂಚರಿಸಬಹುದಾದ ರನ್‌ವೇ ನಿರ್ಮಿಸಲಾಗಿದೆ. ಉದ್ಘಾಟನೆಯ ದಿನದಂದು ಮೊದಲ ವಿಮಾನ ದೆಹಲಿ-ಅಯೋಧ್ಯೆ ನಡುವೆ ಮೊದಲ ವಿಮಾನ ಸಂಚರಿಸಲಿದೆ. 1,450 ಕೋಟಿ ರೂ.ಗಿಂತಲೂ ಅಧಿಕ ವೆಚ್ಚದಲ್ಲಿ ನಿಲ್ದಾಣದ 1ನೇ ಹಂತವನ್ನು ಅಭಿವೃದ್ಧಿಪಡಿಸಲಾಗಿದೆ.

ಜ.6ರಿಂದ ವಿಮಾನಗಳ ಸಂಚಾರ ಆರಂಭವಾಗಲಿದೆ. ಎಲ್‌ಇಡಿ, ಮಳೆನೀರು ಸಂಗ್ರಹ, ಕಾರಂಜಿಗಳು, ಜಲಸಂಸ್ಕರಣ ಘಟಕ, ಕೊಳಚೆನೀರು ಸಂಸ್ಕರಣ ಘಟಕ, ಸೋಲಾರ್ ಪವರ್ ಪ್ಲಾಂಟ್ ಸೇರಿದಂತೆ 5 ಸ್ಟಾರ್ ದರ್ಜೆ ಸೌಲಭ್ಯವನ್ನು ಹೊಂದಿದೆ. ಇದನ್ನೂ ಓದಿ: ಬಿಜೆಪಿಯವರು ರಾಮ ನಮ್ಮ ಅಭ್ಯರ್ಥಿ ಅಂತಾ ಘೋಷಿಸೋದು ಒಂದೇ ಬಾಕಿ: ಸಂಜಯ್‌ ರಾವತ್

ಬೆಂಗಳೂರಿನಿಂದ ಅಯೋಧ್ಯೆಗೆ ನೇರ ವಿಮಾನ ಸಂಪರ್ಕ: ಅಯೋಧ್ಯೆಯಲ್ಲಿರುವ ಮಹರ್ಷಿ ವಾಲ್ಮೀಕಿ ಇಂಟರ್‌ನ್ಯಾಷನಲ್‌ ವಿಮಾನ ನಿಲ್ದಾಣಕ್ಕೆ (Maharishi Valmiki International Airport) ವಿಮಾನ ಸಂಪರ್ಕ ಕಲ್ಪಿಸುವುದಾಗಿ ಏರ್‌ ಇಂಡಿಯಾ ಹೇಳಿದೆ. ಜ.17 ರಿಂದ ಬೆಂಗಳೂರು-ಅಯೋಧ್ಯೆ, ಕೋಲ್ಕತ್ತಾ – ಅಯೋಧ್ಯೆ ಮಧ್ಯೆ ಹಾರಾಟ ನಡೆಸಲಿದೆ. ಬೆಂಗಳೂರಿನಿಂದ ಬೆಳಗ್ಗೆ 8:05ಕ್ಕೆ ಟೇಕಾಫ್‌ ಆದರೆ ಅಯೋಧ್ಯೆಯಲ್ಲಿ ಬೆಳಗ್ಗೆ 10:35ಕ್ಕೆ ಲ್ಯಾಂಡ್‌ ಆಗಲಿದೆ. ಮಧ್ಯಾಹ್ನ 03:40ಕ್ಕೆ ಅಯೋಧ್ಯೆಯಿಂದ ಟೇಕಾಫ್‌ ಆಗುವ ವಿಮಾನ ಸಂಜೆ 06:10ಕ್ಕೆ ಬೆಂಗಳೂರಿನಲ್ಲಿ ಲ್ಯಾಂಡ್‌ ಆಗಲಿದೆ.

ಅಯೋಧ್ಯೆಯಿಂದ ಬೆಳಗ್ಗೆ 11:05ಕ್ಕೆ ಟೇಕಾಫ್‌ ಆಗುವ ವಿಮಾನ ಮಧ್ಯಾಹ್ನ 12:50ಕ್ಕೆ ಕೋಲ್ಕತ್ತಾದಲ್ಲಿ ಲ್ಯಾಂಡ್‌ ಆಗಲಿದೆ. ಮಧ್ಯಾಹ್ನ 01:25ಕ್ಕೆ ಟೇಕಾಫ್‌ ಆಗುವ ವಿಮಾನ ಮಧ್ಯಾಹ್ನ 03:10ಕ್ಕೆ ಅಯೋಧ್ಯೆ ತಲುಪಲಿದೆ. ನಮ್ಮ ನೆಟ್‌ವರ್ಕ್‌ನ ಪ್ರಮುಖ ಕೇಂದ್ರಗಳಾಗಿರುವ ಬೆಂಗಳೂರು ಮತ್ತು ಕೋಲ್ಕತ್ತಾಗಳು ಅಯೋಧ್ಯೆಗೆ ಗೇಟ್‌ವೇಗಳಾಗಿ ಕಾರ್ಯನಿರ್ವಹಿಸುತ್ತವೆ. ಇದರಿಂದಾಗಿ ದಕ್ಷಿಣ ಭಾರತ ಮತ್ತು ಪೂರ್ವ ಭಾರತದ ಯಾತ್ರಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ಏರ್‌ಇಂಡಿಯಾ ತಿಳಿಸಿದೆ.

ಅಯೋಧ್ಯಧಾಮ ಜಂಕ್ಷನ್‌ಗೆ ನಮೋ ಚಾಲನೆ: ಒಟ್ಟು 8 ವಿಶೇಷ ರೈಲುಗಳಿಗೆ ಹಸಿರು ನಿಶಾನೆ ತೋರುವುದಕ್ಕೂ ಮುನ್ನವೇ ಮೋದಿ ಅವರು ಅಭಿವೃದ್ಧಿಪಡಿಸಲಾದ ಅಯೋಧ್ಯಧಾಮ ಜಂಕ್ಷನ್ ರೈಲು ನಿಲ್ದಾಣದ ಉದ್ಘಾಟನೆ ನೆರವೇರಿಸಿದರು. ಈ ಸಂದರ್ಭದಲ್ಲಿ ಸಿಎಂ ಯೋಗಿ ಆದಿತ್ಯನಾಥ್‌, ಸಚಿವ ಅಶ್ವಿನಿ ವೈಷ್ಣವ್‌ ಸೇರಿದಂತೆ ಪ್ರಮುಖ ಗಣ್ಯರು ಜೊತೆಯಲ್ಲಿದ್ದರು.

8 ವಿಶೇಷ ರೈಲುಗಳಿಗೆ ಹಸಿರು ನಿಶಾನೆ: ಕರ್ನಾಟಕಕ್ಕೆ‌ ಸಂಪರ್ಕ ಕಲ್ಪಿಸಲಿರುವ 2 ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಹಾಗೂ ಹೊಸ ಮಾದರಿಯ ಒಂದು ಅಮೃತ್‌ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಸೇರಿದಂತೆ ದೇಶದ ವಿವಿಧ ನಗರಳಿಗೆ ಸಂಪರ್ಕಿಸುವ ಒಟ್ಟು 8 ರೈಲುಗಳ ಸಂಚಾರ ಸೇವೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯೆಯಲ್ಲಿ ವರ್ಚುವಲ್‌ ಆಗಿ ಚಾಲನೆ ನೀಡಿದ್ದಾರೆ. ಹೊಸದಾಗಿ ಚಾಲನೆಗೊಂಡ ವಂದೇ ಭಾರತ್‌ ರೈಲುಗಳು ಮಂಗಳೂರು-ಮುಂಡ್ಗಾವ್‌ (ಗೋವಾ) ಮತ್ತು ಬೆಂಗಳೂರು-ಕೊಯಮತ್ತೂರು ನಡುವೆ ಸಂಚರಿಸಿದರೆ, ಅಮೃತ್‌ ಭಾರತ್‌ ರೈಲು (Amrit Bharat Trains) ಪಶ್ಚಿಮ ಬಂಗಾಳದ ಮಾಲ್ಡಾ-ಬೆಂಗಳೂರು ನಡುವೆ ಸಂಚರಿಸಲಿದೆ.