ಕಾರ್ಪೋರೇಟ್ ತೆರಿಗೆ ಇಳಿಸಿದ ಕೇಂದ್ರ ಸರ್ಕಾರ – ದಾಖಲೆ ಬರೆದ ಸೆನ್ಸೆಕ್ಸ್, ನಿಫ್ಟಿ

ಪಣಜಿ: ಕುಸಿಯುತ್ತಿರುವ ದೇಶದ ಆರ್ಥಿಕತೆಗೆ ಚೇತರಿಕೆಗೆ ಕೇಂದ್ರ ಸರ್ಕಾರ ಹಲವು ಸುಧಾರಣಾ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಇಂದು ದೇಶಿಯ ಕಾರ್ಪೊರೇಟ್ ಸಂಸ್ಥೆ ಮೇಲಿನ ತೆರಿಗೆ ಕಡಿತ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಂಡಿದೆ.

ಗೋವಾದ ಪಣಜಿಯಲ್ಲಿ ಜಿಎಸ್‍ಟಿ ಕೌನ್ಸಿಲ್ ಸಭೆ ನಡೆಯುತ್ತಿದ್ದು ಇಂದು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ದೇಶಿಯ ಕಂಪೆನಿಗಳಿಗೆ ವಿಧಿಸುತ್ತಿದ್ದ ಕಾರ್ಪೋರೇಟ್ ತೆರಿಗೆಯನ್ನು ಕಡಿತಗೊಳಿಸಲಾಗಿದೆ. ಹೊಸ ಸ್ಥಳೀಯ ಸಂಸ್ಥೆಗಳಿಗೂ ಕಾರ್ಪೋರೇಟ್ ಮಾದರಿಯಲ್ಲಿ ತೆರಿಗೆಯಲ್ಲಿ ವಿನಾಯಿತಿ ನೀಡುವ ತೀರ್ಮಾನ ಮಾಡಲಾಗಿದೆ ಎಂದು ಹೇಳಿದರು. ಈ ಸಂಬಂಧ ಸುಗ್ರೀವಾಜ್ಞೆ ಹೊರಡಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.

ಶೇ.30 ರಷ್ಟಿದ್ದ ಕಾರ್ಪೊರೇಟ್ ತೆರಿಗೆಯನ್ನು ಶೇ.22.2ಕ್ಕೆ ಇಳಿಸಲಾಗಿದೆ. ಈ ಹಿಂದೆ ಕಾರ್ಪೋರೇಟ್ ತೆರಿಗೆ, ಸೆಸ್, ಸಚಾರ್ಜ್ ಸೇರಿ ಶೇ.35 ಆಗುತಿತ್ತು. ಈಗ ಇದೆಲ್ಲ ಸೇರಿ ಶೇ.25.2ಕ್ಕೆ ಇಳಿಕೆಯಾಗಿದೆ. ಆಕ್ಟೋಬರ್ 1 ರಿಂದ ಆರಂಭವಾದ ಹೊಸ ಸಂಸ್ಥೆಗಳಿಗೆ ವಿಧಿಸಲಾಗುತ್ತಿದ್ದ ತೆರಿಗೆಯನ್ನು ಶೇ.25 ರಿಂದ 15ಕ್ಕೆ ಕಡಿಮೆ ಮಾಡಲಾಗಿದೆ. ಈ ತೆರಿಗೆ ದರ ಈ ವರ್ಷದ ಏಪ್ರಿಲ್ 1 ರಿಂದಲೇ ಜಾರಿಯಾಗಲಿದೆ.

ತೆರಿಗೆ ಕಡಿತಗೊಳಿಸಿ ಘೋಷಣೆ ಮಾಡಿದ ಬಳಿಕ ಮೇಕ್ ಇನ್ ಇಂಡಿಯಾ ಯೋಜನೆಗೆ ಇದು ನೆರವಾಗಲಿದೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಉದ್ಯೋಗಾವಕಾಶ ಹಾಗೂ ಆರ್ಥಿಕ ಚೇತರಿಕೆಗೆ ಸ್ಫೂರ್ತಿ ನೀಡಲಿದೆ ಎಂದಿದ್ದಾರೆ.

ಸಚಿವರ ಹೇಳಿಕೆ ಬೆನ್ನಲ್ಲೇ ಮುಂಬೈ ಷೇರು ಮಾರುಕಟ್ಟೆಯಲ್ಲಿ ಪ್ರಗತಿ ಕಂಡಿ ಬಂದಿದ್ದು, ಸೆನ್ಸೆಕ್ಸ್ ಸುಮಾರು 1,900 ಅಂಕ ಜಿಗಿತ ಕಡಿದೆ. ನಿಫ್ಟಿ ಇತಿಹಾಸದಲ್ಲಿ ಅತಿ ಹೆಚ್ಚು ಏರಿಕೆ ಕಂಡಿದೆ. ಒಂದೇ ದಿನದಲ್ಲಿ ನಿಫ್ಟಿ 524 ಅಂಕ ಏರಿಕೆಯಾಗಿದೆ.

ಮಧ್ಯಾಹ್ನದ ವೇಳೆಗೆ ಸೆನ್ಸೆಕ್ಸ್ 38,021 ಅಂಶ, ನಿಫ್ಟಿ 11, 273 ಅಂಶ ಏರಿಕೆಯಾಗಿದೆ. 2009ರ ನಂತರ ಒಂದೇ ದಿನದಲ್ಲಿ ಸೆನ್ಸೆಕ್ಸ್ ಅತಿ ಹೆಚ್ಚು ಏರಿಕೆಯಾಗಿದೆ. ಕ್ಷಣ ಕ್ಷಣಕ್ಕೂ ಸೆನ್ಸೆಕ್ಸ್ ಹಾಗೂ ನಿಫ್ಟಿ ಹೆಚ್ಚಳವಾಗುತ್ತಿದ್ದು, ದಾಖಲೆ ಬರೆಯುವ ನಿರೀಕ್ಷೆ ಇದೆ.

Comments

Leave a Reply

Your email address will not be published. Required fields are marked *