ಮೋದಿ ಸರ್ಕಾರಕ್ಕೆ 4 ವರ್ಷ: ಮೇ 26 ರಂದು ದೇಶಾದ್ಯಂತ ಕಾಂಗ್ರೆಸ್‍ನಿಂದ ವಿಶ್ವಾಸಘಾತ ದಿನಾಚರಣೆ

ನವದೆಹಲಿ: ಮೋದಿ ಸರ್ಕಾರದ 4ನೇ ಸಂಭ್ರಮಾಚರಣೆಯ ದಿನವಾದ ಮೇ 26ರಂದು ಕಾಂಗ್ರೆಸ್ ವಿಶ್ವಾಸಘಾತ ದಿನವನ್ನಾಗಿ ಆಚರಿಸಲು ನಿರ್ಧರಿಸಿದೆ.

ಎಐಸಿಸಿ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ನಾಯಕರಾದ ಅಶೋಕ್ ಗೆಹ್ಲೋಟ್ ಮತ್ತು ರಣದೀಪ್ ಸುರ್ಜೆವಾಲ, ಮೋದಿ ಚುನಾವಣಾ ಸಂದರ್ಭದಲ್ಲಿ ಕೊಟ್ಟ ಭರವಸೆಗಳನ್ನು ಈಡೇರಿಸಿಲ್ಲ. ಜನರು ಇಟ್ಟಿದ್ದ ವಿಶ್ವಾಸ ಕೇಂದ್ರ ಸರ್ಕಾರ ಉಳಿಸಿಕೊಂಡಿಲ್ಲ. ಹೀಗಾಗಿ ಮೇ 26ರಂದು ವಿಶ್ವಾಸಘಾತ ದಿನವನ್ನಾಗಿ ದೇಶಾದ್ಯಂತ ಆಚರಿಸುವುದಾಗಿ ಹೇಳಿದ್ದಾರೆ.

ತೈಲ ಬೆಲೆ ದಿನೇ ದಿನೇ ಏರಿಕೆಯಾಗುತ್ತಿದೆ. ಅಧಿಕಾರಕ್ಕೆ ಬರುವಾಗ ಎಲ್ಲಾ ವಸ್ತುಗಳ ಬೆಲೆ ಕಡಿಮೆ ಮಾಡುತ್ತೇನೆ ಎಂದು ಹೇಳಿದ್ದರು. ಆದರೆ ನಾಲ್ಕು ವರ್ಷ ತುಂಬಿದರೂ ಬೆಲೆ ಗಗನಕ್ಕೆ ಏರುತ್ತಿದೆ. ಹಾಗಾಗಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ವಿಶ್ವಾಸಘಾತ್ ದಿನಾಚರಣೆಯನ್ನು ಮಾಡುತ್ತೇವೆ ಎಂದು ಹೇಳಿದರು.

ಯುವಕರಿಗೆ ಉದ್ಯೋಗ ನೀಡುವ ಭರವಸೆ ಹುಸಿಯಾಗಿದೆ. ಭ್ರಷ್ಟಾಚಾರ ವಿಚಾರ ಇಟ್ಟುಕೊಂಡು ಸರ್ಕಾರ ರಚನೆ ಮಾಡಿದರು. ಆದರೆ ಕೇಂದ್ರ ಸರ್ಕಾರವೇ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡುತ್ತಿದೆ. ಪಿಯೂಷ್ ಗೊಯೆಲ್ 10 ರೂಪಾಯಿ ಷೇರು 10 ಸಾವಿರಕ್ಕೆ ವ್ಯಾಪಾರ ಆಗುತ್ತದೆ. ಕೋಟ್ಯಾಂತರ ರೂಪಾಯಿ ಲೂಟಿ ಮಾಡಿ ವಿದೇಶಕ್ಕೆ ಹೋಗುತ್ತಿದ್ದಾರೆ. ಪ್ರತಿ ನಾಗರಿಕನ ಅಕೌಂಟಿಗೆ 15 ಲಕ್ಷ ಹಣ ಬರಲಿಲ್ಲ. ಐಟಿ ಮತ್ತು ಇಡಿಯನ್ನು ಕೇಂದ್ರ ಸರ್ಕಾರ ದುರುಪಯೋಗಪಡಿಸಿಕೊಳ್ಳುತ್ತಿದೆ. ಹಾಗಾಗಿ ವಿಶ್ವಾಸಘಾತ ಹೆಸರಿನಲ್ಲಿ ಮೇ 26ರಂದು ಎಲ್ಲಾ ರಾಜ್ಯಗಳಲ್ಲಿ ಆಚರಣೆ ಮಾಡಲು ಕಾಂಗ್ರೆಸ್ ನಿರ್ಧಾರ ಮಾಡಿದೆ ಎಂದು ತಿಳಿಸಿದರು.

 

Comments

Leave a Reply

Your email address will not be published. Required fields are marked *