ಮೋದಿ ಕಾಂಗ್ರೆಸ್‌ನತ್ತ ಬೆರಳು ತೋರಿಸುವ ಮುನ್ನ ಬಿಜೆಪಿಯ ವಿನಾಶಕಾರಿ ನಡೆ ಗಮನಿಸಲಿ: ಸಿಎಂ ಕಿಡಿ

-ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಯನ್ನು ಮೋದಿ ಶ್ಲಾಘಿಸಬೇಕು: ಸುರ್ಜೆವಾಲಾ
-ಮೋದಿಯವರ ಅಭಿಪ್ರಾಯ ಒಂದು ರಾಜಕೀಯ ಗಿಮಿಕ್‌: ಡಿಕೆಶಿ

ಬೆಂಗಳೂರು: ಗ್ಯಾರಂಟಿಗಳ ಕುರಿತು ಪ್ರಧಾನಿ ಮೋದಿಯವರಿಂದ ಟ್ವೀಟ್ ವಿಚಾರವಾಗಿ, ಸಿಎಂ ಸಿದ್ದರಾಮಯ್ಯ (Siddaramaiah) ಪ್ರತಿಕ್ರಿಯಿಸಿದ್ದು, ಮೋದಿಯವರು (Narendra Modi) ಕಾಂಗ್ರೆಸ್ಸಿನತ್ತ ಬೆರಳು ತೋರಿಸುವ ಮೊದಲು, ಕರ್ನಾಟಕದಲ್ಲಿ ಬಿಜೆಪಿಯವರ (BJP) ವಿನಾಶಕಾರಿ ನಡೆಯನ್ನು ಸೂಕ್ಷ್ಮವಾಗಿ ಗಮನಿಸಲಿ ಎಂದಿದ್ದಾರೆ.

ನಾವು ನಮ್ಮ ಜನರಿಗೆ ನೀಡಿದ ಪ್ರತಿ ಭರವಸೆಯನ್ನು ಪೂರೈಸುತ್ತಿದ್ದೇವೆ. ಎಲ್ಲಾ 5 ಭರವಸೆಗಳನ್ನು ಈಡೇರಿಸಲು 52,000 ಕೋಟಿ ರೂ.ಗೂ ಹೆಚ್ಚಿನ ಹಣ ವಿನಿಯೋಗಿಸಲಾಗಿದೆ. ಕರ್ನಾಟಕದ ಭವಿಷ್ಯವನ್ನು ನಿರ್ಮಿಸಲು ಹೆಚ್ಚುವರಿ 52,903 ಕೋಟಿ ರೂ. ಹಣ ವಿನಿಯೋಗಿಸಲಾಗಿದೆ ಎಂದು ಎಕ್ಸ್‌ನಲ್ಲಿ ತಿರುಗೇಟು ಕೊಟ್ಟಿದ್ದಾರೆ.

40% ಕಮಿಷನ್ ಭ್ರಷ್ಟಾಚಾರದಿಂದಾಗಿ ಕರ್ನಾಟಕವನ್ನು ಬಿಜೆಪಿ ತೊರೆದಿದೆ. ನಾವು ಅದೇ 40%ನ್ನು ಬಳಸುತ್ತಿದ್ದೇವೆ. ಜನರಿಗೆ ಅನುಕೂಲವಾಗುವಂತೆ ಯೋಜನೆ ರೂಪಿಸಿದ್ದೇವೆ. ಇಲ್ಲಿ ನಿಮ್ಮ ಸಾಧನೆ ಏನು? ಭ್ರಷ್ಟ ಆಚರಣೆಗಳನ್ನು ಸಬಲಗೊಳಿಸುವುದು, ಕರ್ನಾಟಕವನ್ನು ಸಾಲದ ಸುಳಿಯಲ್ಲಿ ಸಿಲುಕಿಸುವುದಾಗಿದೆ ಎಂದು ಕಿಡಿಕಾರಿದ್ದಾರೆ.

2025 ರ ವೇಳೆಗೆ ಭಾರತದ ಸಾಲವು 185.27 ಟ್ರಿಲಿಯನ್‌ಗೆ ತಲುಪುತ್ತದೆ ಎಂದು ಅಂದಾಜಿಸಲಾಗಿದೆ. ಇದು GDP ಯ 56.8% ಆಗಿದೆ. ಇದು ಕೇವಲ ಕೆಟ್ಟ ಆಡಳಿತವಲ್ಲ; ಇದು ಪ್ರತಿಯೊಬ್ಬ ಭಾರತೀಯನ ಬೆನ್ನಿನ ಮೇಲೆ ನೀವು ಹಾಕುತ್ತಿರುವ ಭಾರೀ ದೊಡ್ಡ ಹೊರೆಯಾಗಿದೆ. ಕರ್ನಾಟಕವು ಕೇಂದ್ರದ ಬೊಕ್ಕಸಕ್ಕೆ ಗಣನೀಯ ಕೊಡುಗೆ ನೀಡುತ್ತಿದೆ. ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸದಂತೆ ತಡೆಯಲು ನಿಮ್ಮ ಸರ್ಕಾರ ಕರ್ನಾಟಕ ನೀಡುವ ಪ್ರತಿ ರೂಪಾಯಿಗೆ ಕೇವಲ 13 ಪೈಸೆಗಳನ್ನು ಮಾತ್ರ ಹಿಂತಿರುಗಿಸುತ್ತಿದೆ ಇದು ಸಂಪೂರ್ಣ ಶೋಷಣೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಪ್ರಧಾನಿ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ ನಾಯಕ ರಣದೀಪ್ ಸಿಂಗ್ ಸುರ್ಜೆವಾಲಾ, ಕಾಂಗ್ರೆಸ್ ಗ್ಯಾರಂಟಿಗಳು ಜವಾಬ್ದಾರಿಯುತ ಆಡಳಿತದ ಒಂದು ಭಾಗವಾಗಿದೆ. ಬಿಜೆಪಿ ಆಡಳಿತವಿರುವ ಯಾವುದೇ ರಾಜ್ಯದಲ್ಲಿ ಇವುಗಳಲ್ಲಿ 50%ನ್ನು ಜಾರಿಗೆ ತರುತ್ತದೆಯೇ? ಕರ್ನಾಟಕದ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಸಾರ್ವಜನಿಕ ಕಲ್ಯಾಣದ ಯೋಜನೆಗಳನ್ನು ಪ್ರಧಾನಿ ಶ್ಲಾಘಿಸಬೇಕು ಎಂದಿದ್ದಾರೆ.

ಗೃಹ ಲಕ್ಷ್ಮಿ ಯೋಜನೆ ಅಡಿ ಕರ್ನಾಟಕ ಕಾಂಗ್ರೆಸ್ ಸರ್ಕಾರವು 1.21 ಕೋಟಿ ಕನ್ನಡಿಗ ತಾಯಂದಿರು ಮತ್ತು ಸಹೋದರಿಯರ ಬ್ಯಾಂಕ್ ಖಾತೆಗಳಲ್ಲಿ ವಾರ್ಷಿಕವಾಗಿ 25,407 ಕೋಟಿ ರೂ. ವರ್ಗಾಯಿಸುತ್ತದೆ. ಅನ್ನ ಭಾಗ್ಯ ಯೋಜನೆ ಅಡಿ ವಾರ್ಷಿಕವಾಗಿ 8,433 ಕೋಟಿ ರೂ.ಗಳನ್ನು 4.08 ಕೋಟಿ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸುತ್ತದೆ. ಗೃಹ ಜ್ಯೋತಿ ಯೋಜನೆ ಮೂಲಕ 1.60 ಕೋಟಿ ಮನೆಗಳಿಗೆ 200 ಯುನಿಟ್ ಉಚಿತ ವಿದ್ಯುತ್‌ ನೀಡಲಾಗುತ್ತದೆ. ವಾರ್ಷಿಕವಾಗಿ 9,455 ಕೋಟಿ ರೂ. ಹಣ ನೀಡಲಾಗುತ್ತದೆ ಎಂದಿದ್ದಾರೆ.

ಶಕ್ತಿ ಯೋಜನೆಯಿಂದ 2023 ಮೇ ನಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾದಾಗಿನಿಂದ ಇಲ್ಲಿಯವರೆಗೆ 7,310 ಕೋಟಿ ರೂ. ವೆಚ್ಚದಲ್ಲಿ ಈ ಯೋಜನೆ ನಡೆಸಲಾಗಿದೆ. ಯುವನಿಧಿ ಯೋಜನೆ ಅಡಿ 1,82,000 ಪದವೀಧರರು ಮತ್ತು ಡಿಪ್ಲೊಮಾ ಪಾಸಾದ ಯುವಕರಿಗೆ ಎರಡು ವರ್ಷಗಳ ಅವಧಿಗೆ ತಿಂಗಳಿಗೆ 3,000 – 1,500 ರೂ ನೀಡಲಾಗುತ್ತಿದೆ. ಒಟ್ಟಾರೆ ಕನ್ನಡಿಗರ ಬ್ಯಾಂಕ್ ಖಾತೆಗಳಿಗೆ ವಾರ್ಷಿಕವಾಗಿ 52,000 ಕೋಟಿ ರೂ. ಹಣವನ್ನು ವರ್ಗಾಯಿಸಲಾಗುತ್ತದೆ. ಯಾವುದೇ ರಾಜ್ಯದ ಬಿಜೆಪಿ ಸರ್ಕಾರ ಈ ರೀತಿಯ ಯೋಜನೆಗಳನ್ನು ಮಾಡಿದೆಯೇ? ಎಂದು ಅವರು ಪ್ರಶ್ನಿಸಿದ್ದಾರೆ.

ಇದೇ ವಿಚಾರವಾಗಿ ಡಿಸಿಎಂ ಡಿ.ಕೆ ಶಿವಕುಮಾರ್‌ ಪ್ರತಿಕ್ರಿಯಿಸಿ, ಪ್ರಧಾನಿಯವರಿಗೆ ತಪ್ಪು ಮಾಹಿತಿ ಸಿಕ್ಕಿದೆ. ಮೋದಿಯವರ ಅಭಿಪ್ರಾಯ ಒಂದು ರಾಜಕೀಯ ಗಿಮಿಕ್ ಅಷ್ಟೇ ಎಂದು ವ್ಯಂಗ್ಯವಾಡಿದ್ದಾರೆ.

ನಮ್ಮ ಗ್ಯಾರಂಟಿಗಳು ಯಶಸ್ವಿಯಾಗಿ ಜಾರಿಗೊಂಡಿವೆ. ಹೀಗಾಗಿಯೇ ನಮ್ಮ ಗ್ಯಾರಂಟಿಗಳ ಬಗ್ಗೆ ಬಿಜೆಪಿಯವರು ಯಾವಾಗಲೂ ಟೀಕೆ ಮಾಡುತ್ತಿರುತ್ತಾರೆ. ಗ್ಯಾರಂಟಿ ಯೋಜನೆಗಳು ಮುಂದುವರೆಯಲಿವೆ. ಯಾವುದೇ ಕಾರಣಕ್ಕೂ ನಿಲ್ಲಿಸುವ ಪ್ರಶ್ನೆಯೇ ಇಲ್ಲ ಎಂದು ಅವರು ಹೇಳಿದ್ದಾರೆ.

ಈಗ ಚುನಾವಣೆಗಳು ನಡೆಯುತ್ತಿವೆ. ಹೀಗಾಗಿ ಗ್ಯಾರಂಟಿಗಳ ವಿಷಯದಲ್ಲಿ ಮೋದಿಯವರು ರಾಜಕೀಯ ಮಾಡ್ತಿದ್ದಾರೆ. ಸ್ವಾತಂತ್ರ್ಯ ಬಂದಾಗಿಂದಲೂ ಯಾವ ಯೋಜನೆಯನ್ನೂ ಕಾಂಗ್ರೆಸ್ ಹಿಂದಕ್ಕೆ ಪಡೆದಿಲ್ಲ. ನಮ್ಮ ಯೋಜನೆಗಳನ್ನೇ ಬಿಜೆಪಿ ಕಾಪಿ‌ ಮಾಡಿದೆ. ಕಾಂಗ್ರೆಸ್ ಮಹಾರಾಷ್ಟ್ರ, ಜಾರ್ಖಂಡ್ ಚುನಾವಣೆಯನ್ನು ಗೆಲ್ಲುತ್ತೆ ಎಂದು ಅವರಿಗೆ ಗೊತ್ತಿದೆ. ಅದಕ್ಕಾಗಿ ಇಂತಹ ಆರೋಪಗಳನ್ನು ಮಾಡುತ್ತಿದ್ದಾರೆ ಎಂದಿದ್ದಾರೆ.

ಶಕ್ತಿ ಯೋಜನೆ ಪರಿಷ್ಕರಣೆ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಕಿಡಿಕಾರಿದ್ದಾರೆ. ಅವಾಸ್ತವಿಕ ಭರವಸೆಗಳನ್ನು ಈಡೇರಿಸುವುದು ಸುಲಭ. ಆದರೆ, ಅವುಗಳನ್ನು ಸಮರ್ಪಕವಾಗಿ ಜಾರಿಗೊಳಿಸುವುದು ತುಂಬಾ ಕಷ್ಟ ಎಂದು ಮೋದಿ ಕಿಡಿಕಾರಿದ್ದರು.