ಭಾರೀ ಮಳೆ, ಗಾಳಿಗೆ ಧರೆಗುರುಳಿದ ಮೊಬೈಲ್ ಟವರ್!

ಬೆಳಗಾವಿ/ವಿಜಯಪುರ: ಶನಿವಾರ ಸಂಜೆಯಿಂದ ಸುರಿದ ಭಾರೀ ಮಳೆ, ಗಾಳಿಗೆ ಮೊಬೈಲ್ ಟವರೊಂದು ಧರೆಗುರುಳಿದ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ.

ಬೈಲಹೊಂಗಲ ತಾಲೂಕಿನ ಬುಡರಕಟ್ಟಿ ಗ್ರಾಮದ ಪಂಚಾಯತ್ ಆವರಣದಲ್ಲಿರುವ ಮೊಬೈಲ್ ಟವರ್ ನೆಲ ಕಚ್ಚಿದೆ. ಅಲ್ಲದೇ ಕೆಲ ಮನೆಗಳ ಹಂಚುಗಳು, ತಗಡಿನ ಶೆಡ್ಡುಗಳು ಕೂಡ ಗಾಳಿ ರಭಸಕ್ಕೆ ಹಾರಿಹೋಗಿವೆ. ಕೆಲ ಮರಗಳು ಕೂಡ ಉರುಳಿ ಬಿದ್ದಿವೆ.

ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಈ ಸಂಬಂಧ ದೊಡ್ಡವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯಪುರ ಜಿಲ್ಲೆಯಲ್ಲಿ ನಿನ್ನೆ ರಾತ್ರಿ ಸುರಿದ ಬಿರುಗಾಳಿ ಮಳೆಗೆ ಜನ ತತ್ತರಿಸಿ ಹೋಗಿದ್ದು, ಜಿ. ಸಿಂದಗಿ ತಾ. ಮುಳಸಾವಳಗಿ ಗ್ರಾಮದಲ್ಲಿ ಬಿರುಗಾಳಿಗೆ ಮನೆಯ ಮೇಲಿದ್ದ ತಗಡಿನ ಮೇಲ್ಛಾವಣಿ ಹಾರಿ ಹೋಗಿದೆ. ಸಾಹೇಬಗೌಡ ಈರ್ ಎಂಬವರಿಗೆ ಸೇರಿದ ತಗಡಿನ ಮನೆ ಇದಾಗಿದೆ.

ಭಾರೀ ಪ್ರಮಾಣದ ಮಳೆ, ಗಾಳಿಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ಥವಾಗಿತ್ತು. ಕಳೆದ ರಾತ್ರಿಯಿಂದ ಜಿಲ್ಲೆಯ ಹಲವೆಡೆ ವಿದ್ಯುತ್ ಸಂಪರ್ಕ ಕಡಿತವಾಗಿತ್ತು. ಎಲ್ಲೆಂದರಲ್ಲಿ ವಿದ್ಯುತ್ ಕಂಬಗಳು, ಜಿಲ್ಲೆಯಾದ್ಯಂತ 50ಕ್ಕೂ ಹೆಚ್ಚು ಮರಗಳು ಧರೆಗೆ ಉರುಳಿ ಬಿದ್ದಿವೆ. ಒಟ್ಟಾರೆಯಾಗಿ ಭಾರೀ ಬಿರುಗಾಳಿಯಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

Comments

Leave a Reply

Your email address will not be published. Required fields are marked *