ಸಿನಿಮೀಯ ಶೈಲಿಯಲ್ಲಿ 3 ಕೋಟಿ ಮೌಲ್ಯದ ಮೊಬೈಲ್ ಎಗರಿಸಿದ್ನಾ ಲಾರಿ ಚಾಲಕ?

– ಕಂಟೈನರ್‌ಗೆ ಕನ್ನ ಕೊರೆದು 5,140 ಮೊಬೈಲ್‌ ಕಳ್ಳತನ

ಚಿಕ್ಕಬಳ್ಳಾಪುರ: ದೆಹಲಿಯಿಂದ ಬೆಂಗಳೂರಿಗೆ (Bengaluru) ಸಾಗಾಟ ಮಾಡ್ತಿದ್ದ 3 ಕೋಟಿ ರೂ. ಮೌಲ್ಯದ ಮೊಬೈಲ್‌ಗಳು (Mobile) ಸಿನಿಮೀಯ ಶೈಲಿಯಲ್ಲಿ ಕಳ್ಳತನವಾಗಿರುವ ಪ್ರಕರಣ ಚಿಕ್ಕಬಳ್ಳಾಪುರದಲ್ಲಿ (Chikkaballapur) ನಡೆದಿದೆ.

ನ.22ರಂದು ದೆಹಲಿಯಿಂದ ಬೆಂಗಳೂರಿಗೆ ಮೊಬೈಲ್‌ಗಳನ್ನು ಸಾಗಿಸುತ್ತಿದ್ದ ಕಂಟೈನರ್ ವಾಹನ ಬೆಂಗಳೂರು ತಲುಪದೆ ಚಿಕ್ಕಬಳ್ಳಾಪುರ ತಾಲೂಕಿನ ರೆಡ್ಡಿಗೊಲ್ಲವಾರಹಳ್ಳಿ ಬಳಿ ಪತ್ತೆಯಾಗಿತ್ತು. ಚಾಲಕ ಕೂಡ ನಾಪತ್ತೆಯಾಗಿದ್ದ. ವಾಹನಕ್ಕೆ ಆಳವಡಿಸಿದ್ದ ಜಿಪಿಎಸ್ ಮೂಲಕ ವಾಹನ ಪತ್ತೆ ಹಚ್ಚಲಾಗಿದೆ. ವಾಹನ ಪರಿಶೀಲನೆ ನಡೆಸಿದಾಗ ವಾಹನದ ಚಾಲಕನ ಕ್ಯಾಬಿನ್ ಹಿಂಭಾಗದಿಂದ ಕಂಟೈನರ್‌ಗೆ ಕನ್ನ ಕೊರೆದು ಮೊಬೈಲ್‌ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ.

ಇನ್ನೂ ಲಾರಿ ಚಾಲಕ ರಾಹುಲ್ ಎಂಬಾತನ ಮೊಬೈಲ್ ಸ್ವಿಚ್ಡ್ ಅಫ್ ಆಗಿದ್ದು ಆತನ ಮೇಲೆಯೇ ಅನುಮಾನ ಮೂಡಿದೆ. ಲಾರಿ ಕಂಪನಿಯ ಪ್ರತಿನಿಧಿ ಪದ್ಮನಾಭಂ ಎಂಬವರು ಪೇರೇಸಂದ್ರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಿಸಿದ್ದಾರೆ. ಸದ್ಯ ಬಿಎನ್ಎಸ್ ಸೆಕ್ಷನ್ 306ರ ಅಡಿ ಪ್ರಕರಣ ದಾಖಲಾಗಿದೆ.

ಆರೋಪಿಗಾಗಿ ಪೊಲೀಸರು ಹುಡಕಾಟ ನಡೆಸಿದ್ದಾರೆ. ಇನ್ನೂ ಲಾರಿ ಪರಿಶೀಲನೆ ನಂತರ ಕಂಟೈನರ್ ನಲ್ಲಿ 257 ಬಾಕ್ಸ್ ನಲ್ಲಿದ್ದ ಮೊಬೈಲ್‌ಗಳು ಕಳ್ಳತನವಾಗಿದ್ದು, ಕೇವಲ 76 ಬಾಕ್ಸ್‌ಗಳು ಲಾರಿಯಲ್ಲಿ ಉಳಿದುಕೊಂಡಿವೆ ಎಂದು ತಿಳಿದು ಬಂದಿದೆ.