ಮರಾಠಿ ಕಲಿಯಲ್ಲ ಎಂದಿದ್ದಕ್ಕೆ ಉದ್ಯಮಿ ಕಚೇರಿಯೇ ಧ್ವಂಸ

ಮುಂಬೈ: ಮರಾಠಿ (Marathi) ಕಲಿಯುವುದಿಲ್ಲ ಎಂದು ಹೇಳಿದ ಉದ್ಯಮಿಯೊಬ್ಬರ ಕಚೇರಿಯನ್ನು ರಾಜ್‌ ಠಾಕ್ರೆಯ (Raj Thackeray) ಎಂಎನ್‌ಎಸ್‌ (MNS) ಕಾರ್ಯಕರ್ತರು ಧ್ವಂಸ ಮಾಡಿರುವ ಘಟನೆ ಮುಂಬೈನಲ್ಲಿ ನಡೆದಿದೆ.

ಉದ್ಯಮಿ ಸುಶಿಲ್‌ ಕೇಡಿಯಾ ಅವರ ಕಚೇರಿ ಧ್ವಂಸದ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ರಾಜ್ ಠಾಕ್ರೆ ಬೆಂಬಲಿಗರು ಕಚೇರಿಯ ಮೇಲೆ ಇಟ್ಟಿಗೆಯಂಥ ವಸ್ತುಗಳನ್ನು ಎಸೆಯುತ್ತಿರುವುದು ದೃಶ್ಯದಲ್ಲಿದೆ. ದಾಳಿಯನ್ನು ತಡೆಯಲು ಭದ್ರತಾ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದರೂ, ವಿಧ್ವಂಸಕ ಕೃತ್ಯ ತಡೆಯಲಾಗಿಲ್ಲ. ಇದನ್ನೂ ಓದಿ: 20 ವರ್ಷಗಳ ಬಳಿಕ ಮತ್ತೆ ಒಂದಾದ ಉದ್ಧವ್‌-ರಾಜ್‌ ಠಾಕ್ರೆ

ಸುಶಿಲ್‌ ಕೇಡಿಯಾ ಅವರು ತಮ್ಮ X ಖಾತೆಯಲ್ಲಿ, 30 ವರ್ಷಗಳಿಂದ ಮುಂಬೈನಲ್ಲಿ ವಾಸಿಸುತ್ತಿದ್ದರೂ ನನಗೆ ಮರಾಠಿ ಸರಿಯಾಗಿ ತಿಳಿದಿಲ್ಲ. ನಿಮ್ಮ ಘೋರ ದುಷ್ಕೃತ್ಯಗಳ ಬಗ್ಗೆ ತಿಳಿದಿದೆ. ನಾನು ಮರಾಠಿ ಕಲಿಯುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದೇನೆ. ನೀವು ಏನು ಮಾಡುತ್ತೀರಿ ಎಂದು ರಾಜ್‌ ಠಾಕ್ರೆ ಅವರಿಗೆ ಟ್ಯಾಗ್‌ ಮಾಡಿ ಪೋಸ್ಟ್‌ ಹಾಕಿದ್ದಾರೆ.

ವಿಧ್ವಂಸಕ ಕೃತ್ಯದ ಸ್ವಲ್ಪ ಸಮಯದ ನಂತರ ಕೇಡಿಯಾ ಮತ್ತೊಮ್ಮೆ ಎಕ್ಸ್‌ ಖಾತೆಯಲ್ಲಿ ಠಾಕ್ರೆಗೆ ಟ್ಯಾಗ್ ಮಾಡಿ, ನೂರಾರು MNS ಕಾರ್ಯಕರ್ತರೊಂದಿಗೆ ಬೆದರಿಕೆ ಹಾಕುವುದರಿಂದ ಅವರು ನಿರರ್ಗಳವಾಗಿ ಮರಾಠಿ ಭಾಷಿಕರಾಗುವುದಿಲ್ಲ. ಬೆದರಿಕೆಗಳಲ್ಲ, ಪ್ರೀತಿ ಜನರನ್ನು ಒಟ್ಟಿಗೆ ಸೇರಿಸುತ್ತದೆ ಎಂದು ಮತ್ತೊಂದು ಪೋಸ್ಟ್‌ ಮಾಡಿದ್ದಾರೆ. ಇದನ್ನೂ ಓದಿ: ಉದ್ಯಮಿ ನೀರವ್ ಮೋದಿ ಸಹೋದರ ನೇಹಲ್ ಮೋದಿ ಬಂಧನ

ತನಗೆ ಭದ್ರತೆ ಒದಗಿಸುವಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಒತ್ತಾಯಿಸಿದ್ದಾರೆ. ಅಂಬೋಲಿ, ಸೈಬರ್ ಕ್ರೈಂ ಬಾಂದ್ರಾ, SB1 ಹಲವಾರು ಪೊಲೀಸ್ ಠಾಣೆಗಳಿಂದ ನನಗೆ ಕರೆ ಬರುತ್ತಿದೆ ಎಂದು ಉದ್ಯಮಿ ತಿಳಿಸಿದ್ದಾರೆ.