ಆಕ್ಷೇಪಾರ್ಹ ಹೇಳಿಕೆ ಪ್ರಕರಣ; ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು – CRPF ಭದ್ರತೆ ಕೋರಿದ ಸಿ.ಟಿ ರವಿ

ಬೆಂಗಳೂರು: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ (Lakshmi Hebbalkar) ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದೆ. ಸಿಐಡಿ ತಂಡ ತನಿಖೆ ನಡೆಸುವ ಹೊತ್ತಿನಲ್ಲೇ ಎಂಎಲ್‌ಸಿ ಸಿ.ಟಿ ರವಿ (CT Ravi) ಅವರು, ಪೊಲೀಸರು ಬಂಧಿಸಿದ್ದನ್ನು ಖಂಡಿಸಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ.

ತಮ್ಮ ಮೇಲೆ ಪೊಲೀಸ್‌ ದೌರ್ಜನ್ಯ ನಡೆದಿದೆ, ಮಾನವ ಹಕ್ಕುಗಳನ್ನು ಪೊಲೀಸರು ಉಲ್ಲಂಘಿಸಿದ್ದಾರೆ ಎಂದು ಸಿ.ಟಿ ರವಿ ಮಾನವ ಹಕ್ಕುಗಳ ಆಯೋಗಕ್ಕೆ ದೂರು ಕೊಟ್ಟಿದ್ದಾರೆ. ಇದನ್ನೂ ಓದಿ: ಆಂಧ್ರ, ತಮಿಳುನಾಡಿನಲ್ಲಿ ನಮಗಿಂತಲೂ ಹೆಚ್ಚಿನ ದರ ಇದೆ: ಶಿವಾನಂದ ಪಾಟೀಲ್ ಸಮರ್ಥನೆ

ಅಲ್ಲದೇ ಖಾನಾಪುರ ಹಾಗೂ ಹಿರೇಬಾಗೇವಾಡಿ ಪೊಲೀಸರಿಗೆ ತಾವು ಕೊಟ್ಟ ದೂರಿನ ಮೇಲೆ ಎಫ್‌ಐಆರ್ ದಾಖಲಿಸಲು ಸೂಚಿಸಬೇಕು. ಡಿಜಿಪಿ, ಬೆಳಗಾವಿ ಎಸ್‌ಪಿ, ಪೊಲೀಸ್ ಆಯುಕ್ತರ ಅಮಾನತು ಆಗಬೇಕು. ಸಿಬಿಐ ಸಂಸ್ಥೆಗೆ ಈ ಪ್ರಕರಣದ ತನಿಖೆ ನಡೆಸಲು ಸೂಚಿಸಬೇಕು. ನನ್ನ ಪ್ರಾಣಕ್ಕೆ ಅಪಾಯವಿದ್ದು, ಸಿಆರ್‌ಪಿಎಫ್ ಭದ್ರತೆ ಒದಗಿಸಬೇಕು ಎಂದು ದೂರಿನಲ್ಲಿ ಮನವಿ ಮಾಡಿದ್ದಾರೆ.

ಪ್ರಕರಣದಲ್ಲಿ ಸಿಎಂ ಹಾಗೂ ಗೃಹ ಸಚಿವರು ನಿರ್ಲಕ್ಷ್ಯ ತಾಳಿದ್ದಾರೆ. ಡಿಸಿಎಂ ಡಿಕೆ ಶಿವಕುಮಾರ್, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಎಂಎಲ್‌ಸಿ ಚನ್ನರಾಜ್ ಹಟ್ಟಿಹೊಳಿ ತಮಗೆ ಪ್ರಾಣ ಬೆದರಿಕೆ ಒಡ್ಡಿದ್ದಾರೆ. ಈ ಮೂಲಕ ಮಾನವ ಹಕ್ಕುಗಳನ್ನು ಉಲ್ಲಂಘಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ ಎಂದು ಆಪ್ತ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಎಸ್‌ಸಿ, ಎಸ್ಟಿ ಶಾಸಕರು, ಸಚಿವರು ಊಟಕ್ಕೆ ಕರೆದಿದ್ದಾರೆ, ಸಿಎಂ ಹೋಗಿದ್ದಾರೆ, ತಪ್ಪೇನು? – ಎಂ.ಬಿ ಪಾಟೀಲ್

ಏನಿದು ಕೇಸ್‌?
ಅಂಬೇಡ್ಕಕರ್‌ ಕುರಿತು ಅಮಿತ್‌ ಶಾ ಅವರು ನೀಡಿದ ಹೇಳಿಕೆ ಖಂಡಿಸಿ ಸುವರ್ಣಸೌಧದ ಪರಿಷತ್‌ ಸಭಾಂಗಣದಲ್ಲಿ ಕಾಂಗ್ರೆಸ್‌ ಪ್ರತಿಭಟನೆ ನಡೆಸುತ್ತಿತ್ತು. ಈ ವೇಳೆ ಸಿ.ಟಿ ರವಿ ಅವರನ್ನು ಡ್ರಗ್‌ ಅಡಿಕ್ಟ್‌ ಎಂದು ಕರೆದರು. ಈ ವೇಳೆ ಆಕ್ರೋಶಗೊಂಡ ಲಕ್ಷ್ಮಿ ಹೆಬ್ಬಾಳ್ಕರ್‌ ಸಿ.ಟಿ ರವಿ ಅವರ ರಸ್ತೆ ಅಪಘಾತ ಪ್ರಕರಣವನ್ನು ಉಲ್ಲೇಖಿಸಿ ಕೊಲೆಗಡುಕ ಎಂದು ಜರೆದರು. ಈ ವೇಳೆ ಸಿ.ಟಿ ರವಿ ಆಕ್ಷೇಪಾರ್ಹ ಪದ ಬಳಸಿ ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಸದ್ಯ ಈ ಪ್ರಕರಣವನ್ನು ಸಿಐಡಿ ವಿಶೇಷ ತಂಡ ತನಿಖೆ ನಡೆಸುತ್ತಿದೆ. ಈ ನಡುವೆ ಸಿ.ಟಿ ರವಿ ಅವರು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದಾರೆ. ಇದನ್ನೂ ಓದಿ: ಕರ್ನಾಟಕದ ಗಂಡಸರು ಮುಂದಿನ ಚುನಾವಣೆಯಲ್ಲಿ `ಕೈ’ಗೆ ಮತ ಹಾಕಬಾರದು – ಯತ್ನಾಳ್ ಗರಂ