ಸುಮ್ನೆ ನಿಂತ್ಕೊಳ್ಳಿ, ನಿಮ್ಮ ಸರದಿ ಬಂದಾಗ ಮಾತಾಡಿ- ರೈತ ಮುಖಂಡನಿಗೆ ಶಾಸಕ ಆವಾಜ್!

ಮಂಡ್ಯ: ಸುಮ್ನೆ ನಿಂತುಕೊಳ್ಳಿ.. ನಿಮ್ಮ ಸರದಿ ಬಂದಾಗ ಮಾತಾನಾಡಿ ಅಂತ ಶಾಸಕರೊಬ್ಬರು ರೈತ ಮುಖಂಡನಿಗೆ ಆವಾಜ್ ಹಾಕಿದ ಘಟನೆ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಬಾಬುರಾಯನ ಕೊಪ್ಪಲು ಗ್ರಾಮದಲ್ಲಿ ನಡೆದಿದೆ.

ಸಹಕಾರಿ ಸಕ್ಕರೆ ಕಾರ್ಖಾನೆ ಆರಂಭಿಸುವ ಸಂಬಂಧ ಎಂಎಲ್‍ಎ ಮತ್ತು ರೈತ ಮುಖಂಡನ ಜೊತೆ ಮಾತಿನ ಚಕಮಕಿ ನಡೆದಿದ್ದು, ಈ ವೇಳೆ ರೈತ ಮುಖಂಡ ರಮೇಶ್ ಅವರು ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ್ರೀಕಂಠಯ್ಯ ಅವರನ್ನು ಪ್ರಶ್ನಿಸಿದ್ದಾರೆ. ಇದರಿಂದ ಗರಂ ಆದ ಶಾಸಕರು, ನಾನೀಗ ಬೇರೆಯವರ ಸಮಸ್ಯೆ ಕೇಳುತ್ತಿದ್ದೇನೆ. ನಿಂತುಕೊಳ್ಳಿ ಸುಮ್ನೆ. ಏನು ನಡವಳಿಕೆ ನಿಮ್ಮದು… ಏಯ್ ನಿಲ್ಲಿಸ್ರಿ ನೀವು… ನಿಲ್ಸಪ್ಪ ಆಯ್ತು. ನೆಕ್ಸ್ಟ್ ನಿಮ್ಮ ಸರದಿ ಬಂದಾಗ ಮಾತನಾಡಿ ಎಂದು ಜೋರು ಧ್ವನಿಯಲ್ಲಿ ಗದರಿದ್ದಾರೆ.

ರೈತ ಮುಖಂಡನ ಪ್ರಶ್ನೆಯೇನು?:
ಸೋಮವಾರ ಬಾಬುರಾಯನಕೊಪ್ಪಲು ಗ್ರಾಮದಲ್ಲಿ ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ್ರೀಕಂಠಯ್ಯ ಜನ ಸಂಪರ್ಕ ಸಭೆ ನಡೆಸುತ್ತಿದ್ದರು. ಈ ವೇಳೆ ರೈತ ಮುಖಂಡ ರಮೇಶ್ ಅವರು ಶಾಸಕರನ್ನು ಕುರಿತು, ಪಾಂಡವಪುರ ವ್ಯಾಪ್ತಿಯಲ್ಲಿರುವ ಪಿಎಸ್‍ಎಸ್‍ಕೆ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ನಂಬಿಕೊಂಡು ರೈತರು ಕಬ್ಬು ಬೆಳೆಯುತ್ತಿದ್ದಾರೆ. ಆದರೆ ಕಾರ್ಖಾನೆ ನಿಂತು ಹೋಗಿದ್ದು ಅದರ ಆರಂಭಕ್ಕೆ ಶಾಸಕರಾಗಿ ಏನು ಮಾಡಿದ್ದೀರಿ ಎಂದು ಪ್ರಶ್ನೆ ಮಾಡಿದ್ದಾರೆ.

ಅಲ್ಲದೇ ಕಾರ್ಖಾನೆ ಹಣ ನಷ್ಟ ಮಾಡಿದವರ ಆಸ್ತಿ ಮಾರಾಟ ಮಾಡಿ ವಸೂಲಿ ಮಾಡಿ. ನಿಮಗೆ ತಾಲೂಕಲ್ಲಿ ಜವಾಬ್ದಾರಿ ಕೊಟ್ಟಿದ್ದೇವೆ. ಕಾರ್ಖಾನೆ ಉಳಿಸಿ ಎಂದು ಪಟ್ಟು ಹಿಡಿದಿದ್ದಾರೆ. ಕೊನೆಗೆ ರೈತನ ಮಾತಿಗೆ ಮಣಿದ ಶಾಸಕ ರವೀಂದ್ರ ಶ್ರೀಕಂಠಯ್ಯ ಕಾರ್ಖಾನೆ ಆರಂಭದ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸುತ್ತೇನೆ ಎಂದು ಭರವಸೆ ನೀಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *