ಸುವರ್ಣ ತ್ರಿಭುಜ ಅವಶೇಷ ಪತ್ತೆ- ಶಾಸಕ ರಘುಪತಿ ಭಟ್ ಪ್ರತಿಕ್ರಿಯೆ

ಕಾರವಾರ: ಮುಂಬೈ-ಗೋವಾ ನಡುವಿನ ಮಾಲ್ವಾನ್ ಪ್ರದೇಶದ ವ್ಯಾಪ್ತಿಯಲ್ಲಿ ಬರುವ ಆಳ ಸಮುದ್ರದಲ್ಲಿ ಪತ್ತೆಯಾದ ಬೋಟಿನ ಅವಶೇಷಗಳು ತಮ್ಮವರದ್ದೆಂದು ದೃಢೀಕರಿಸಿರುವುದಾಗಿ ಉಡುಪಿ ಶಾಸಕ ರಘುಪತಿ ಭಟ್ ತಿಳಿಸಿದ್ದಾರೆ.

ಕಳೆದ ಐದು ತಿಂಗಳಿಂದ ನಾಪತ್ತೆಯಾದ ಮೀನುಗಾರರ ಸುಳಿವು ಸಿಗದೇ ಇರುವುದರಿಂದ ಶಾಸಕರ ನೇತೃತ್ವದಲ್ಲಿ ಮೀನುಗಾರರ ಕುಟುಂಬದ ಜೊತೆಗೆ ಪರಿಶೀಲನೆ ನಡೆಸಲು ಸಮುದ್ರಕ್ಕೆ ತೆರಳಿದ್ದರು. ಇದೀಗ ಬೋಟ್ ಅವಶೇಷ ಸಿಕ್ಕಿರುವ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಬೋಟ್ ಹಡಗಿಗೆ ಡಿಕ್ಕಿ ಹೊಡೆಯುವ ಮೂಲಕ ದುರಂತಕ್ಕೀಡಾಗಿದೆ ಎಂದು ತಿಳಿಸಿದ್ದಾರೆ.

ಯಾವುದೋ ದೊಡ್ಡ ಹಡಗು ಡಿಕ್ಕಿ ಹೊಡೆದಿದ್ದರಿಂದ ಈ ದುರಂತ ಸಂಭವಿಸಿದೆ. ಈ ಬಗ್ಗೆ ತನಿಖೆಯಾಗಬೇಕು. ನಾವು ಮೀನುಗಾರರೊಂದಿಗೆ ಹುಡುಕಲು ತೆರಳದಿದ್ದಲ್ಲಿ ಪತ್ತೆಕಾರ್ಯ ನಡೆಯುತ್ತಿರಲಿಲ್ಲ. ಈ ಕುರಿತು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮ್ ಅವರನ್ನು ಭೇಟಿಯಾಗಿ ಚರ್ಚಿಸಲಿದ್ದೇವೆ ಎಂದರು. ಇದನ್ನೂ ಓದಿ: ದುರಂತಕ್ಕೀಡಾದ ಸುವರ್ಣ ತ್ರಿಭುಜ ಬೋಟಿನ ಅವಶೇಷಗಳು ಪತ್ತೆ!

ಡಿಸೆಂಬರ್ 13 ರಂದು ಮಲ್ಪೆಯಿಂದ ಹೊರಟ ಸುವರ್ಣ ತ್ರಿಭುಜ ಮೀನುಗಾರಿಕಾ ಬೋಟ್ ಡಿ.15 ರಂದು ಕಾಣೆಯಾಗಿದೆ. ಸತತ ಐದು ತಿಂಗಳ ನಂತರ ಮೀನುಗಾರರು ಹಾಗೂ ಭಾರತೀಯ ನೌಕಾದಳ ಬೋಟಿನ ಅವಶೇಷಗಳನ್ನು ಮಹಾರಾಷ್ಟ್ರದ ಮಾಲ್ವನ್ ಪ್ರದೇಶದಿಂದ 33 ಕಿಲೋಮೀಟರ್ ವ್ಯಾಪ್ತಿಯ ಆಳ ಸಮುದ್ರದಲ್ಲಿ ಪತ್ತೆ ಮಾಡಲಾಗಿದೆ. ಈ ಪತ್ತೆ ಕಾರ್ಯಕ್ಕೆ ಶಾಸಕ ಹಾಗೂ ಕಾಣೆಯಾದ ಕುಟುಂಬದವರು ಸೇರಿದಂತೆ ಭಾನುವಾರದಂದು ಐಎನ್‍ಎಸ್ ನಿರೀಕ್ಷಕ್ ಹಡಗಿನಲ್ಲಿ 9 ಜನರು ತೆರಳಿದ್ದರು. ಇದೀಗ ಸೋನಾರ್ ಟೆಕ್ನಾಲಜಿ ಮಾಲಕ ಸುವರ್ಣ ತ್ರಿಭುಜ ಹಡಗನ್ನು ಪತ್ತೆ ಮಾಡಿದ್ದಾರೆ.

Comments

Leave a Reply

Your email address will not be published. Required fields are marked *