‘ಜಮೀರ್ ಅಹ್ಮದ್ ಒಬ್ಬ ಚಿಲ್ಲರೆ ಗಿರಾಕಿ’- ಏಕವಚನದಲ್ಲೇ ರೇಣುಕಾಚಾರ್ಯ ವಾಗ್ದಾಳಿ

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಜಮೀರ್ ಅಹ್ಮದ್ ಹಾಗೂ ರೇಣುಕಾಚಾರ್ಯ ಅವರ ವಾಕ್ ಸಮರ ಹೆಚ್ಚು ಸದ್ದು ಮಾಡುತ್ತಿದೆ. ಇಬ್ಬರು ನಾಯಕರು ಪರಸ್ಪರ ಮಾತಿನ ಕೆಸರೆರಚಾಟದಲ್ಲಿ ತೊಡಗಿದ್ದಾರೆ. ಇಬ್ಬರ ನಡುವಿನ ವಾಕ್ ಸಮರ ವೈಯಕ್ತಿಕ ಮಟ್ಟಕ್ಕೆ ಇಳಿದಿದ್ದು, ಜಮೀರ್ ಒಬ್ಬ ಚಿಲ್ಲರೆ ಗಿರಾಕಿ ಎಂದು ರೇಣುಕಾಚಾರ್ಯ ಕಿಡಿಕಾರಿದ್ದಾರೆ.

ಇಂದು ಮಾಜಿ ಸಚಿವ ಜಮೀರ್ ವಿಚಾರಕ್ಕಾಗಿಯೇ ಸಿಎಂ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿ ಶಾಸಕ ರೇಣುಕಾಚಾರ್ಯ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದರು. ಜಮೀರ್ ಒಬ್ಬ ಚಿಲ್ಲರೆ ಗಿರಾಕಿ. ಪುಟ್‍ಪಾತ್‍ನಲ್ಲಿ ಇದ್ದವನು. ಚಾಮರಾಜಪೇಟೆಯಲ್ಲಿ ದಂಧೆ ಮಾಡಿಕೊಂಡಿದ್ದವನನ್ನು ಕರೆತಂದು ದೇವೇಗೌಡರು ಮಂತ್ರಿ ಮಾಡಿದ್ದರು. ಅವರಿಗೆ ಜಮೀರ್ ಏನು ಮಾಡಿದ್ದರೂ ಎಂದು ಎಲ್ಲರಿಗೂ ಗೊತ್ತಿದೆ ಎಂದರು.

ಮಾಜಿ ಸಿಎಂ ಎಚ್‍ಡಿ ಕುಮಾರಸ್ವಾಮಿ ಅವರ ಹಿಂದೆ ‘ಅಣ್ಣ ಕುಮಾರಣ್ಣ ಅಂತಾ ಹೇಳಿಕೊಂಡು ತಿರುಗುತ್ತಿದ್ದ’. ಅವರಿಗೂ ಜಮೀರ್ ಏನು ಮಾಡಿದ್ರು ಎಂದು ಗೊತ್ತಿದೆ. ನನ್ನ ವೈಯಕ್ತಿಕ ವಿಷಯಗಳ ಬಗ್ಗೆ ಜಮೀರ್ ಮಾತನಾಡಿದ್ರೆ ನಾನೂ ಕೂಡ ಅದೇ ಭಾಷೆಯಲ್ಲಿ ಮಾತನಾಡುವುದು ನನಗೆ ಗೊತ್ತಿದೆ. ಜಮೀರ್ ಗೆ ಸಂದರ್ಭದಲ್ಲಿ ಎಚ್ಚರಿಕೆ ಕೊಡುತ್ತೇನೆ ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದರು. ಇದನ್ನು ಓದಿ: ರೇಣುಕಾಚಾರ್ಯ ಇಸ್ಪೀಟ್ ಎಲೆಯಲ್ಲಿರುವ ಜೋಕರ್‌ನಂತೆ: ಜಮೀರ್ ವ್ಯಂಗ್ಯ

ರೇಣುಕಾಚಾರ್ಯ ಏಕವಚನ ವಾಗ್ದಾಳಿ ಜಮೀರ್ ವಿರುದ್ಧ ಮಾತ್ರ ಸೀಮಿತವಾಗಿರಲಿಲ್ಲ. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮೇಲೂ ಕೂಡ ತಿರುಗಿತ್ತು. ‘ದಿನೇಶ್ ಗುಂಡೂರಾವ್, ಮೊದಲು ನಿನ್ನ ಪಕ್ಷ ಸರಿಪಡಿಸಿಕೋ. ನಿನಗೆ ರಾಜಕಾರಣದ ಮೆದುಳೇ ಇಲ್ಲ. ಅದು ಬಿಟ್ಟು ನನ್ನ ಬಗ್ಗೆ ಮಾತನಾಡಬೇಡ’ ಎಂದು ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದರು. ಇದೆಲ್ಲವನ್ನು ನೋಡುತ್ತಿದ್ದರೆ ರೇಣುಕಾಚಾರ್ಯ ವರ್ಸಸ್ ಕಾಂಗ್ರೆಸ್ ಶಾಸಕರ ನಡುವಿನ ವೈಯುಕ್ತಿಕ ವಾಕ್ ಸಮರ ಸದ್ಯಕ್ಕೆ ಮುಗಿಯುವ ಲಕ್ಷಣಗಳು ಮಾತ್ರ ಕಾಣಿಸುತ್ತಿಲ್ಲ.

Comments

Leave a Reply

Your email address will not be published. Required fields are marked *