ನಮ್ಮ-ನಿಮ್ಮೆಲ್ಲರ ರಕ್ತ ಒಂದೇ ಬಣ್ಣದ್ದು, ಮೂರು ದಿನಗಳ ಬಾಳಲ್ಲಿ ಏಕೆ ಕಿತ್ತಾಟ?: ಹ್ಯಾರೀಸ್

ಬೆಂಗಳೂರು: ನಮ್ಮ ನಿಮ್ಮೆಲ್ಲರ ರಕ್ತ ಒಂದೇ ಬಣ್ಣದಾಗಿದ್ದು, ಹೀಗಿರುವಾಗ ಮೂರು ದಿನಗಳ ಬಾಳಲ್ಲಿ ಕಿತ್ತಾಟ ಏಕೆ ಎಂದು ಕಾಂಗ್ರೆಸ್ ಶಾಸಕ ಹ್ಯಾರೀಸ್ ಹೇಳಿದರು.

ಇಂದು ವಿಧಾನಸಭೆಯಲ್ಲಿ ಹಿಜಬ್ ಬಗ್ಗೆ ಪರೋಕ್ಷ ಪ್ರಸ್ತಾಪ ಮಾಡಿದ ಅವರು, ನಾವೆಲ್ಲರೂ ಅಣ್ಣ-ತಮ್ಮಂದಿರಂತೆ ಬಾಳೋಣ. ನಮ್ಮ-ನಿಮ್ಮೆಲ್ಲರ ರಕ್ತ ಒಂದೇ ಬಣ್ಣದ್ದು. ಮೂರು ದಿನಗಳ ಬಾಳಲ್ಲಿ ಏಕೆ ಕಿತ್ತಾಟ ಎಂದು ಬಿಜೆಪಿ ನಾಯಕರಿಗೆ ಮಾತಲ್ಲೇ ತಿವಿದರು.

ನಮ್ಮ ನಿಮ್ಮ ರಕ್ತವೂ ಒಂದೇ ಬಣ್ಣದ್ದು, ನಮ್ಮೆಲ್ಲರ ಡಿಎನ್‍ಎ ಟೆಸ್ಟ್ ಮಾಡಿ, ಎಲ್ಲ ಒಂದೇ ಇರುತ್ತೆ. ಅನ್ಯೋನ್ಯತೆಯಿಂದ ಅಣ್ಣ-ತಮ್ಮಂದಿರಾಗಿ ಬಾಳೋಣ. ಶಾಲೆಯಲ್ಲಿ ಎಲ್ಲ ಭಾರತೀಯರು ಅಣ್ಣ-ತಮ್ಮಂದಿರು ಎಂದು ಪ್ರಾರ್ಥನೆಯಲ್ಲಿತ್ತು. ಇದೇ ಪ್ರಾರ್ಥನೆ ಇಂದಿಗೂ ನಮ್ಮ ಮನದಲ್ಲಿ ಇದೆ ಎಂದರು. ಇದನ್ನೂ ಓದಿ: ಮೂವರು ಶಾಸಕರು ಬಿಜೆಪಿಗೆ ಸೇರ್ಪಡೆ – ಸಚಿವ ಮುಖೇಶ್ ನಾಮಫಲಕ ನಾಪತ್ತೆ

ನಮ್ಮಲ್ಲಿ ವ್ಯತ್ಯಾಸ ತರುವ ಪ್ರಯತ್ನ ಏಕೆ? ಅಧಿಕಾರಕ್ಕಾಗಿನಾ? ನಾವು ಸಾವಿರ ವರ್ಷ ಬದುಕಲು ಸಾಧ್ಯನಾ..?. ಸಿಗುವ ಮೂರು ದಿನಗಳಲ್ಲಿ ಕಿತ್ತಾಟ ಏಕೆ? ಇಂತಹ ಬದುಕು ಬೇಕಾ? ಅವರವರ ನಂಬಿಕೆ ಅವರರನ್ನು ಕಾಪಾಡುತ್ತೆ, ಕಿತ್ತಾಟ ಏಕೆ..!? ಎಲ್ಲರೂ ಸೇರಿ ದೇಶಕ್ಕೆ ಸ್ವಾತಂತ್ರ್ಯ ತಂದಿದ್ದೇವೆ. ಇವಾಗ ಎಲ್ಲ ಸೇರಿ ದೇಶದಲ್ಲಿ ಸಮಾಧಾನ ತರುವ ಪ್ರಯತ್ನ ಮಾಡಬೇಕು ಎಂದು ಹೇಳಿದರು.

ಇದೇ ವೇಳೆ ಮುಖ್ಯಮಂತ್ರಿ ಪರಿಹಾರ ನಿಧಿ ಎಲ್ಲರಿಗೂ ಕೊಡಿ. ಈಗ ಕೇವಲ ಬಿಪಿಎಲ್ ಕಾರ್ಡ್ ಇದ್ದವರಿಗೆ ಮಾತ್ರ ಮುಖ್ಯಮಂತ್ರಿ ಪರಿಹಾರ ನಿಧಿ ಕೊಡಲಾಗ್ತಿದೆ. ಇದರಿಂದ ಮಧ್ಯಮವರ್ಗದ ಜನರಿಗೆ ತುಂಬಾ ತೊಂದರೆ ಆಗ್ತಿದೆ. ಮುಖ್ಯಮಂತ್ರಿ ಪರಿಹಾರ ನಿಧಿಯನ್ನ ಎಪಿಎಲ್ ಕಾರ್ಡ್ ಇದ್ದವರಿಗೂ ನೀಡಿ. ಒಂದು ಹಾಸ್ಪಿಟಲ್ ಗೆ 15 ರಿಂದ 20 ಲಕ್ಷ ಆಗುತ್ತೆ. ಮಧ್ಯಮವರ್ಗದ ಜನರು ಇಷ್ಟು ದೊಡ್ಡ ಹಣ ಹೇಗೆ ಕಟ್ಟುತ್ತಾರೆ. ಹೀಗಾಗಿ ಬಿಪಿಎಲ್ ನಂತೆ ಎಪಿಎಲ್ ಕಾರ್ಡ್ ಇದ್ದವರಿಗೂ ಮುಖ್ಯಮಂತ್ರಿ ಪರಿಹಾರ ನಿಧಿ ಕೊಡಬೇಕು. ಇದರಿಂದ ಮಧ್ಯಮವರ್ಗದ ಜನರಿಗೆ ಅನುಕೂಲವಾಗಲಿದೆ ಎಂದು ಅವರು ತಿಳಿಸಿದರು.

Comments

Leave a Reply

Your email address will not be published. Required fields are marked *